

ಬೆಂಗಳೂರು: ಶಾಲೆ-ಕಾಲೇಜುಗಳು, ಆಸ್ಪತ್ರೆಗಳು, ಕಚೇರಿಗಳ ಆವರಣ ಸೇರಿ ಸಂಘ ಸಂಸ್ಥೆಗಳಿಂದ ಉದ್ಯಾನವನ ಹಾಗೂ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಬುಧವಾರ ನಗರದಾದ್ಯಂತ ವಿಶ್ವ ಪರಿಸರದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಆರ್ಟ್ ಆಫ್ ಲಿವಿಂಗ್ ಹಮ್ಮಿಕೊಂಡಿದ್ದ ಕೋಟಿ ಸಸಿಗಳನ್ನು ನೆಡುವ ಅಭಿಯಾನಕ್ಕೆ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ, ಲಕ್ಷ್ಮೀತರು ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಭಾರತದ 22 ರಾಜ್ಯಗಳಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ 2300 ಸ್ವಯಂ ಸೇವಕರು, ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕರ ಸಹಯೋಗದಲ್ಲಿ ಸಸಿಗಳನ್ನು ನಡೆಲಿದ್ದಾರೆ ಎಂದು ಹೇಳಿದರು.
ಅಭಿಯಾನದ ಭಾಗವಾಗಿ ‘ಸೀಡ್ ರಾಖಿ’ ಯೋಜನೆಯಡಿ ರಾಜ್ಯಾದ್ಯಂತ 4 ಲಕ್ಷ ಗಿಡಗಳನ್ನು ನೆಡಲಾಗುತ್ತಿದೆ. ಜತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಆಶ್ರಮ ಹಾಗೂ ಸುತ್ತಮುತ್ತಲ ಕಟ್ಟಡಗಳಲ್ಲಿ ಒಂದು ಸಾವಿರ ಮಳೆ ನೀರು ಕುಯ್ಲು ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಸಸಿಗಳನ್ನು ನೆಡುವ ಜತೆಗೆ ರೈತರು ಪ್ರಾಕೃತಿಕ ಕೃಷಿಗೆ ಮರಳಬೇಕು ಎಂದು ಗುರೂಜಿ ಸಲಹೆ ನೀಡಿದರು.