

ಬೆಂಗಳೂರು: ಯೂನಿವರ್ಸಿಟಿ ಹೆಲ್ತ್ ಪೋಗ್ರಾಂ ಅಡಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (ಆರ್‌ಜಿಯುಎಚ್‌ಎಸ್) ರಾಜ್ಯದ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ ತಪಾಸಣೆ ಮತ್ತು ಜಾಗೃತಿಗಾಗಿ ಕುಟುಂಬಗಳನ್ನು ದತ್ತು ಪಡೆಯುವ ಕಾರ್ಯಕ್ರಮ ಜಾರಿಗೊಳಿಸುತ್ತಿದೆ.
ವಿಶ್ವ ರಕ್ತದೊತ್ತಡ ದಿನದ ಅಂಗವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಯದೇವ ಹೃದ್ರೋಗ ಸಂಸ್ಥೆ ಮತ್ತು ಇನ್‌ಸ್ಟಿಟ್ಯೂಟ್ ಆ್ ಪಾಲಿಸಿ ರಿಸರ್ಚ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ.ಬಿ.ಸಿ. ಭಗವಾನ್ ಕುಟುಂಬ ದತ್ತು ಕಾರ್ಯಕ್ರಮ ೋಷಣೆ ಮಾಡಿದರು.
ರಾಷ್ಟ್ರೀಯ ಆರೋಗ್ಯ ಮತ್ತು ನಿಯಂತ್ರಣ ಹಾಗೂ ಸಮುದಾಯ ಔಷಧ ಇಲಾಖೆ ವತಿಯಿಂದ ಗ್ರಾಮೀಣ ಭಾಗದಲ್ಲಿ ಕುಟುಂಬಗಳನ್ನು ದತ್ತು ತೆಗೆದುಕೊಳ್ಳಲಾಗುವುದು. ಯುವಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮದಲ್ಲಿ ವಿವಿ ಅಡಿಯಲ್ಲಿ ಬರುವ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕನಿಷ್ಠ 8ರಿಂದ 9 ಜನರ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ವೈದ್ಯಕೀಯ ಸಲಹೆ ನೀಡಲಿದ್ದಾರೆ. ಈ ವೇಳೆ ಅಧಿಕ ರಕ್ತದೊತ್ತಡ, ಮಧುಮೇಹ, ಅಪೌಷ್ಠಿಕತೆ ಬಗ್ಗೆ ಹೆಚ್ಚು ಗಮನಹರಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಮಾತನಾಡಿ, ಹೃದಯಸಂಬಂಧಿ ಸಾವುಗಳ ಪೈಕಿ ಶೇ. 30 ಅಧಿಕ ರಕ್ತದೊತ್ತಡದಿಂದ ಸಂಭವಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ರಕ್ತದೊತ್ತಡಕ್ಕೆ ಒಳಗಾದವರ ಸಂಖ್ಯೆ ಕಡಿಮೆ ಇತ್ತು. ಈಗ ನಗರ ಪ್ರದೇಶಗಳ ರೀತಿಯಲ್ಲಿ ಅಲ್ಲಿಯೂ ಹೆಚ್ಚಳವಾಗಿದೆ. ವಿಶ್ವದಲ್ಲಿ 1.5 ಶತಕೋಟಿ ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇದರಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಜಾಗತಿಕವಾಗಿ ಹೋಲಿಸಿದರೆ ಭಾರತದಲ್ಲಿ ದುಪ್ಪಟ್ಟು ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ಲೋಬಲ್ ಹೆಲ್ತ್ ಅಡ್ವೋಕೆಸಿ ಇನ್‌ಕ್ಯೂಬಿಟರ್‌ನ ಡಾ. ಓಂ ಪ್ರಕಾಶ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಉಪ ಕುಲಪತಿ ಡಾ. ರಿಯಾಜ್ ಬಾಷಾ, ಎನ್‌ಎಸ್‌ಎಸ್ ಘಟಕದ ಮುಖ್ಯಸ್ಥ ವಸಂತ್ ಶೆಟ್ಟಿ, ಇನ್‌ಸ್ಟಿಟ್ಯೂಟ್ ಫಾರ್ ಪಾಲಿಸಿ ನಿರ್ದೇಶಕ ರಿಸರ್ಚ್ ಅಮಿತ್ ಕರ್ಣಿಕ ಇತರರಿದ್ದರು.
ಕೋಟ್:
ತಂಬಾಕು ನಿಯಂತ್ರಣದಲ್ಲಿ ಜಗತ್ತಿಗೆ ಕರ್ನಾಟಕ ಮಾದರಿಯಾಗಿದ್ದು, ವಿಶ್ವ ದರ್ಜೆ ಪ್ರಶಸ್ತಿ ಪಡೆದಿದೆ. ಶೇ. 7 ತಂಬಾಕು ಸೇವನೆ ನಿಯಂತ್ರಣ ಸಾಧನೆ ಮಾಡಿರುವುದು ವಿಶ್ವದಲ್ಲಿ ಕರ್ನಾಟಕ ಮಾತ್ರ. ಇದನ್ನು ಪರಿಗಣಿಸಿ ವಿಶ್ವ ಸಂಸ್ಥೆಯೇ ರಾಜ್ಯವನ್ನು ಪ್ರಶಂಸೆ ಮಾಡಿದೆ. ಇದೇ ರೀತಿಯಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ.
-ಡಾ. ಯು.ಎಸ್ ವಿಶಾಲ್‌ರಾವ್ , ಕ್ಯಾನ್ಸರ್ ತಜ್ಞ