

ಬೆಂಗಳೂರು: ರಕ್ತದಾನ ಮಾಡುವ ಮೂಲಕ ಒಬ್ಬರ ಜೀವ ಉಳಿಸಬಹುದಾಗಿದೆ. ಹಾಗಾಗಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಸಹಯೋಗದಲ್ಲಿ ನಗರದ ವಿಧಾನ ಸೌಧದಿಂದ ಕಂಠೀರವ ಕ್ರೀಡಾಂಗಣದ ವರೆಗೆ ಹಮ್ಮಿಕೊಂಡಿದ್ದ ರಕ್ತ ದಾನದ ಕುರಿತು ಜಾಗೃತಿ ಜಾಥಾಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದ ಬೇಡಿಕೆ ಅರಿತು ಸಕಾಲದಲ್ಲಿ ಪೂರೈಕೆ ಮಾಡುವ ಮೂಲಕ ಜೀವಗಳನ್ನು ಉಳಿಸಬಹದಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು. ಆ ಮೂಲಕ ಬೇಡಿಕೆಯನ್ನು ಪೂರೈಸಬೇಕಿದೆ ಎಂದರು.
‘‘20 ವರ್ಷಗಳ ರಕ್ತದಾನದ ಸಂಭ್ರಮಾಚರಣೆ ಸಂದರ್ಭದಲ್ಲಿ ರಕ್ತದಾನಿಗಳಿಗೆ ಧನ್ಯವಾದಗಳು’ ಎಂಬ ಘೋಷವಾಕ್ಯದೊಂದಿಗೆ ಜಾಥಾ ನಡೆಸುವ ಮೂಲಕ ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ರಕ್ತದಾನಿಗಳು ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.