

ನಂಜನಗೂಡು: ಹೊಸ ಕೌಶಲ ಮತ್ತು ಆವಿಷ್ಕಾರಕ್ಕೆ ಕಾರ್ಯಾಗಾರಗಳು ಅಗತ್ಯವಾಗಿವೆ ಎಂದು ಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ.ವೈ.ಟಿ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ತಾಂಡವಪುರ ಗ್ರಾಮದ ಬಳಿ ಇರುವ ಎಂಐಟಿ ಕಾಲೇಜಿನಲ್ಲಿ ಮೆಕಾನಿಕಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಟಿಂಗ್ ಟೂಲ್ ತಂತ್ರಜ್ಞಾನ ಕಾರ್ಯಾಗಾರದಲ್ಲಿ ಮಾತನಾಡಿದರು.
ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಮ್ಮ ಕಾಲೇಜು ಕೂಡ ಗುರುತಿಸಿಕೊಂಡಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರ ಜತೆಗೆ ಪ್ರತಿಷ್ಠಿತ ಕಾಲೇಜುಗಳು ಉಪನ್ಯಾಸಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಹಲವು ಸಂಸ್ಥೆಗಳು ಸಂಶೋಧನೆಗೆ ಪ್ರಯೋಜಕತ್ವ ನೀಡುವುದರ ಮೂಲಕ ಕೌಶಲಾಭಿವೃದ್ಧಿಗೆ ಸಹಕಾರ ನೀಡುತ್ತಿದ್ದು ಉತ್ತಮ ಬೆಳವಣಿಗೆ ಎಂದರು.
ಬಳಿಕ ಐಐಟಿ ಮದ್ರಾಸ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪ್ರಸಾದ್ ಪಟ್ನಾಯಕ್ ಮಾತನಾಡಿ, ಆಟೋಮೋಟಿವ್ ವಿಭಾಗದಲ್ಲಿ ಹೊಸ ತಂತ್ರಜ್ಞಾನ ಬಲಪಡಿಸಲು ಹಾಗೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅಳವಡಿಕೆಗೆ ಉಪನ್ಯಾಸಕರು ಹಾಗೂ ಸಂಶೋಧಕರು ನಿರಂತರ ಪ್ರಯತ್ನದಲ್ಲಿದ್ದಾರೆ. ಕಟಿಂಗ್ ಟೂಲ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಾಹನಗಳ ರಚನೆಗೆ ವಿನ್ಯಾಸ ಹಾಗೂ ಉತ್ಪಾದನೆಯಲ್ಲಿ ಸುಧಾರಣೆ ತರಲಾಗಿದೆ. ನೂತನ ತಂತ್ರಜ್ಞಾನಗಳ ಮೂಲಕ ಕಾರುಗಳ ಕಾರ್ಯಕ್ಷಮತೆ ಪರೀಕ್ಷೆ ನಡೆಸಬಹುದಾಗಿದೆ. ನೂತನ ತಂತ್ರಜ್ಞಾನದ ಬಳಕೆಯಿಂದ ಆಟೋಮೋಟಿವ್ ಇಂಜಿನಿಯರಿಂಗ್‌ನಲ್ಲಿ ಹೊಸ ಹೊಸ ಸಂಶೋಧನೆ ಮತ್ತು ದಕ್ಷತೆ ಬೆಳೆಸಬಹುದಾಗಿದೆ ಎಂದರು.
ಕಾರ್ಯಾಗಾರದಲ್ಲಿ ಎಂಐಟಿ ಸಂಸ್ಥೆಯ ಉಪಾಧ್ಯಕ್ಷ ಡಾ.ಜಿ.ಹೇಮಂತ್ ಕುಮಾರ್, ಡಾ.ಎಚ್.ಕೆ.ಚೇತನ್, ಬೆಂಗಳೂರಿನ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಾಂಶುಪಾಲ ಡಾ.ಎಸ್.ಬಿ.ಕಂದಗಾಲ್, ಪ್ರೊ.ಮಲ್ಲಿಕಾರ್ಜುನ್, ಪ್ರೊ.ಕೃಷ್ಣಮೂರ್ತಿ, ಪ್ರೊ.ಕೀರ್ತಿ ಪ್ರಸಾದ್, ಡಾ.ಪುನೀತ್ ಇತರರು ಇದ್ದರು.