

ಬಂಟ್ವಾಳ: ಸಂಸ್ಕೃತಿ ನಾಶವಾದರೆ ಭಾಷೆ ನಾಶವಾಗುತ್ತದೆ. ಒಂದು ಭಾಷೆಯ ಬಳಕೆ ಕಡಿಮೆಯಾದರೆ ಆ ಭಾಷೆ ನಿಧಾನವಾಗಿ ಅಳಿವಿನಂಚಿಗೆ ಹೋದಂತೆ. ಹಾಗಾಗಿ ಅದ್ಭುತ ಸಾಹಿತ್ಯದ ಕನ್ನಡ ಭಾಷೆ ಉಳಿಸುವ ಅನಿವಾರ್ಯತೆ ಉಂಟಾಗಿದೆ. ಆ ನಿಟ್ಟಿನಲ್ಲಿ ಕನ್ನಡ ಶಿಕ್ಷಕರ ಪಾತ್ರ ಶ್ರೇಷ್ಠವಾದದ್ದು ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಂ ಪೂಜಾರಿ ಹೇಳಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಬಂಟ್ವಾಳ ತಾಲೂಕು ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಕನ್ನಡ ಭಾಷಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಉದ್ಘಾಟಿಸಿ ಕನ್ನಡ ಭಾಷೆಯನ್ನು ಪ್ರೀತಿಸಬೇಕು. ಕನ್ನಡದ ಬಳಕೆ ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ಕನ್ನಡ ಭಾಷಾ ಶಿಕ್ಷಕರ ಜವಾಬ್ದಾರಿ ಮಹತ್ತರವಾದದ್ದು ಎಂದು ಅಭಿಪ್ರಾಯಪಟ್ಟರು.
ಬಂಟ್ವಾಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ಟಾಳ ಅಧ್ಯಕ್ಷತೆ ವಹಿಸಿದರು. ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಮಹಮ್ಮದ್ ನಂದಾವರ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವಿ.ಸು.ಭಟ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ನಿರೂಪಿಸಿದರು.