

ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಮದ ಕೌಡಿಚ್ಚಾರಿನ ವರ್ತಕ ಇಸ್ಮಾಯಿಲ್ ಹಾಜಿ ಸ್ವಂತ ಖರ್ಚಿನಲ್ಲಿ ಕೌಡಿಚ್ಚಾರಿನಿಂದ ಮಾಯಿಲಕೊಚ್ಚಿವರೆಗಿನ ರಸ್ತೆ ಬದಿಯ ಚರಂಡಿ ದುರಸ್ತಿಗೊಳಿಸಿ ಮಳೆನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿದ್ದಾರೆ.
ಚರಂಡಿಯಲ್ಲಿ ಹೂಳು ಹಾಗೂ ತ್ಯಾಜ್ಯ ತುಂಬಿ ಮಳೆನೀರಿನ ಹರಿವಿಗೆ ತಡೆಯಾಗುತ್ತಿತ್ತು. ಕಳೆದ ಭಾನುವಾರ ಸುರಿದ ಜಡಿಮಳೆಯ ವೇಳೆ ಕೌಡಿಚ್ಚಾರಿನಿಂದ ಮಾಯಿಲಕೊಚ್ಚಿ ತನಕದ ರಸ್ತೆ ಬದಿಯ ಚರಂಡಿಯಲ್ಲಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ಸಮಸ್ಯೆ ಎದುರಾಗಿತ್ತು. ಇಸ್ಮಾಯಿಲ್ ಹಾಜಿ ಅವರ ಮನೆ ಮತ್ತು ಅಂಗಡಿಗೆ ಮಳೆ ನೀರು ನುಗ್ಗಿ ತೊಂದರೆಯಾಗಿತ್ತು.
ಚರಂಡಿ ದುರಸ್ತಿ ಮಾಡದ ಪರಿಣಾಮ ಎದುರಾಗುತ್ತಿದ್ದ ಸಮಸ್ಯೆಯ ಹಿನ್ನೆಲೆಯಲ್ಲಿ ಇಸ್ಮಾಯಿಲ್ ಹಾಜಿ ಸ್ವತಃ ತಾವಾಗಿಯೇ ಸಮಸ್ಯೆಗೆ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಆಡಳಿತ ವ್ಯವಸ್ಥೆ ಮಾಡಬೇಕಾಗಿದ್ದ ಕೆಲಸವನ್ನು ಮಾಡಿರುವ ಇಸ್ಮಾಯಿಲ್ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.