ನಂದಿಬೆಟ್ಟ ಕುಸಿಯುವ ಆತಂಕ; ರೋಪ್ ವೇ ಯೋಜನೆ ಕೈಬಿಡಲು ತಜ್ಞರ ಒತ್ತಾಯ # Save Nandi Hill

New Project
Published on

ಬೆಂಗಳೂರು: ಪೌರಾಣಿಕ, ಐತಿಹಾಸಿಕ ಮತ್ತು ಪ್ರಾಕೃತಿಕ ಮಹತ್ವ ಹೊಂದಿರುವ ನಂದಿಬೆಟ್ಟದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಿಗೆಯೇ ಮುಂದುವರೆದರೆ; ಮುಂದಿನ ದಿನಗಳಲ್ಲಿ ಭೂಕುಸಿತವಾಗುವ ಸಂಭವವಿದೆ ಎಂದು ಪರಿಸರವಾದಿಗಳು ಮತ್ತು ಭೂವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ (ಯುಎಚ್‌ಆರ್‌ಎಸ್‌ಎ್) ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಸೇವ್ ನಂದಿ ಹಿಲ್’ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ, ಒಂದು ಕಾಲಕ್ಕೆ ಬೆಂಗಳೂರಿಗೆ ನೀರು ನೀಡುತ್ತಿದ್ದ ಹಲವು ನದಿಗಳ ಉಗಮ ಸ್ಥಾನವಾಗಿರುವ ನಂದಿಬೆಟ್ಟದ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ, ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ನಡೆದ ರೀತಿಯಲ್ಲಿ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ಗಣಿಗಾರಿಕೆಗೆ ಬಳಸುವ ರಾಸಾಯನಿಕ ಅಂಶವು ಬೆಟ್ಟದಿಂದ ಉತ್ಪತ್ತಿಯಾಗುವ ಅಂತರ್ಜಲದಲ್ಲಿ ಬೆರೆತು ಜೀವಿಗಳ ದೇಹವನ್ನು ಸೇರುತ್ತಿದ್ದು, ಇದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗ ಉಂಟಾಗುತ್ತದೆ ಎಂದರು.

ಈ ನಡುವೆ ಪ್ರವಾಸೋದ್ಯಮದ ಹೆಸರಿನಲ್ಲಿ ಕಟ್ಟಡಗಳು, ರಸ್ತೆ ಅಗಲೀಕರಣ, ರೋಪ್‌ವೇ ನಿರ್ಮಾಣದ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿಕೊಂಡಿದೆ. ಒಂದು ವೇಳೆ ರೋಪ್‌ವೇ ನಿರ್ಮಾಣ ಮಾಡಿದಲ್ಲಿ ಬಂಡೆಗಳ ನೈಸರ್ಗಿಕ ಬಲ ಕುಸಿದು ಗುಡ್ಡ ಕುಸಿಯುವ ಸಾಧ್ಯತೆ ಇರುತ್ತದೆ. ಈಗಾಗಲೇ ನಂದಿಬೆಟ್ಟದ ಸುತ್ತಮುತ್ತ ಹಲವು ರೆಸಾರ್ಟ್ ಮತ್ತಿತರ ವಸತಿ ಕೇಂದ್ರಗಳು ಸ್ಥಾಪನೆಯಾಗಿದ್ದು, ಇದರಿಂದ ಅರಣ್ಯ ನಾಶ, ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದೆ. ಪ್ರವಾಸಿಗರ ಮಿತಿಮೀರಿದ ಆಗಮನ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ನಂದಿಬೆಟ್ಟದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಯಲ್ಲಪ್ಪ ರೆಡ್ಡಿ ಒತ್ತಾಯಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಅಮೆರಿಕಾದ ಗೀವ್ ಲೈಫ್ ಫೌಂಡೇಷನ್ ಮುಖ್ಯಸ್ಥ ಡಾ. ಬರ್ತ್ ಎಸ್. ಫಿಶರ್, ಸಾಮಾಜಿಕ ಹೋರಾಟಗಾರ್ತಿ ಸಂಜನಾ ಜಾನ್, ಭೂವಿಜ್ಞಾನಿ ಫ್ರೊ.ರೇಣುಕಾ ಪ್ರಸಾದ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಯುಹೆಚ್‌ಆರ್‌ಎಸ್‌ಎಫ್ ಸಂಸ್ಥಾಪಕ ಸಿ.ಡಿ. ಕಿರಣ್ ಮತ್ತು ಸಂಘಟಕ ಮಂಜುನಾಥ ಹೆಗ್ಡೆ ಉಪಸ್ಥಿತರಿದ್ದರು.

"ನೂರಾರು ಮೈಲು ದೂರದಿಂದ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಬೆಂಗಳೂರಿಗೆ ನೀರು ತರುವುದರ ಬದಲು ಪಕ್ಕದಲ್ಲೇ ಇರುವ ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ಸೇರಿದಂತೆ ಪಂಚ ನದಿಗಳ ಉಗಮ ಸ್ಥಾನದ ಜಲ ಮೂಲಗಳನ್ನು ಪುನಶ್ಚೇತನಗೊಳಿಸಿದರೆ ಬೆಂಗಳೂರಿನ ನೀರಿನ ಅಗತ್ಯವನ್ನು ಪೂರೈಸಲು ಸಾಧ್ಯ"

-ಪ್ರೊ.ಟಿ.ಜೆ.ರೇಣುಕಾ ಪ್ರಸಾದ್, ಭೂವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net