ಅಡ್ಡದಾರಿಯಿಂದ ಯಶಸ್ಸು ಸಾಧ್ಯವಿಲ್ಲ; ರಾಮಯ್ಯ ಕಾಲೇಜು ಘಟಿಕೋತ್ಸವದಲ್ಲಿ ಪ್ರೊ.ನರಹರಿ ಅಭಿಮತ

RIT
Published on

ಬೆಂಗಳೂರು: ಪದವಿ ಪಡೆದ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಮಾಡುವುದು ಸಹಜ. ಹಾಗಂತ ಅಡ್ಡದಾರಿಯಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾದ್ಯಾಪಕ ಪ್ರೊ.ವೈ.ನರಹರಿ ಹೇಳಿದ್ದಾರೆ.

ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ) ಯ 16ನೇ ಘಟಿಕೋತ್ಸವದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಗ್ರಾಜುವೇಶನ್ ದಿನ ಬಹಳ ಮಹತ್ವದ್ದು. ಒಂದು ಕಡೆ ಪದವಿ ಪ್ರಮಾಣ ಪತ್ರವನ್ನು ಸ್ವೀಕರಿಸುವುದು ಹಾಗೂ ಮತ್ತೊಂದು ಕಡೆ ಭವಿಷ್ಯದ ಬಗ್ಗೆ ನಿರ್ಣಯ ಮಾಡಬೇಕಾದ ದಿನ ಕೂಡಾ. ಸದ್ಯ ದೇಶದಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ. ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗ ಅಥವ ಉನ್ನತ ಅಧ್ಯಯನವನ್ನು ನಡೆಸಬಹುದು. ಆದರೆ ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಕೆಲ ನಿಯಮಗಳನ್ನು ಪಾಲಿಸಬೇಕು. ಕನಸನ್ನು ದೊಡ್ಡ ಪ್ರಮಾಣದಲ್ಲಿ ಕಾಣುವುದು, ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗದಿರುವುದು, ಕಡಿಮೆ ಅವಧಿಯಲ್ಲಿ ಹಣ ಗಳಿಸಬೇಕು ಅಥವಾ ಯಶಸ್ಸು ಸಾಧಿಸಬೇಕೆಂದು ಅಡ್ಡದಾರಿ ಹಿಡಿಯಬಾರದು. ಸಮಯವನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು. ಪ್ರತಿ ಕೆಲಸದಲ್ಲೂ ಶ್ರದ್ಧೆ, ಭಕ್ತಿ, ಬದ್ಧತೆ ಇರಬೇಕು. ಆರ್‌ಐಟಿಯ ಧ್ಯೇಯ ವಾಕ್ಯದಂತೆ ಜ್ಞಾನ, ವಿಜ್ಞಾನ, ಭಕ್ತಿಯ ಸಮಾಗಮವೇ ಯಶಸ್ಸು. ಇದನ್ನು ರೂಢಿಸಿಕೊಂಡು ದೇಶಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೊ.ನರಹರಿ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ 1433 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವಿಶೇಷವಾಗಿ ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಲಾಯಿತು.

ಸಮಾರಂಭದಲ್ಲಿ ಪದ್ಮಭೂಷಣ ವಿ.ಕೆ.ಅತ್ರೆ, ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಜಯರಾಮ, ಉಪಾಧ್ಯಕ್ಷ ಎಂ.ಆರ್.ಸೀತಾರಾಮ, ನಿರ್ದೇಶಕ ಎಂ.ಆರ್.ರಾಮಯ್ಯ, ಶೈಕ್ಷಣಿಕ ಸಲಹೆಗಾರ ಡಾ.ಕರಿಸಿದ್ಧಪ್ಪ, ಡಾ.ಪಾರ್ಶ್ವನಾಥ, ಡಾ.ಎನ್.ವಿ.ಆರ್.ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ಶ್ರೇಷ್ಠ ವ್ಯಕ್ತಿಗಳಿಂದ ಬದಲಾವಣೆ ಸಾಧ್ಯ

ದೇಶ ಯಾವಾಗಲೂ ಗ್ರೇಟ್ (ಶ್ರೇಷ್ಠ) ವ್ಯಕ್ತಿಗಳನ್ನು ನಿರೀಕ್ಷಿಸುತ್ತದೆ. ಕಾರಣ ಶ್ರೇಷ್ಠ ವ್ಯಕ್ತಿಗಳಿಂದ ಮಹತ್ವದ ಬದಲಾವಣೆ ಸಾಧ್ಯ. ಆರ್‌ಐಟಿಯಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿಧರರಾಗುತ್ತಾರೆ. ಅವರಲ್ಲಿ ಕೆಲವರಾದರೂ ಗ್ರೇಟ್ ವ್ಯಕ್ತಿಗಳಾಬೇಕು ಎಂದು ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಜಯರಾಮ ಕರೆ ನೀಡಿದರು.

"ಪ್ರತಿ ವಿದ್ಯಾರ್ಥಿಗಳ ಹಿನ್ನೆಲೆ ಬೇರೆಯಾಗಿದ್ದರೂ ಎಲ್ಲರೂ ಮಾನವರು ಎಂಬ ಮಾನವೀಯತೆಯನ್ನು ಮರೆಯಬಾರದು. ಬದ್ಧತೆ, ನೈತಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ವಿಶೇಷ ಕೊಡುಗೆ ನೀಡಬೇಕು"

-ಎಂ.ಆರ್.ಸೀತಾರಾಮ, ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net