ಕಾರ್ಮಿಕರು ಕಾನೂನಿನ ಅರಿವು ಹೊಂದಿರಲಿ

ಕಾರ್ಮಿಕರು ಕಾನೂನಿನ ಅರಿವು ಹೊಂದಿರಲಿ
Published on

ಕೆ.ಆರ್.ನಗರ: ಪ್ರತಿಯೊಬ್ಬ ಕಾರ್ಮಿಕನೂ ಕಾನೂನಿನ ಬಗ್ಗೆ ಸ್ಪಷ್ಟವಾದ ಅರಿವು ಹೊಂದಿರುವ ಜತೆಗೆ ಸರ್ಕಾರದ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಪಟ್ಟಣದ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ.ಅರವಿಂದ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಇತ್ತೀಚೆಗೆ ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ನಿಯಮಾನುಸಾರ ಕಾರ್ಮಿಕರನ್ನು ಮಾಲೀಕರು ತಮಗೆ ಇಷ್ಟ ಬಂದಂತೆ ದುಡಿಸಿಕೊಳ್ಳುವುದನ್ನು ವಿರೋಧಿಸಿ ಕಾರ್ಮಿಕ ಬಂಧುಗಳು ಒಂದುಗೂಡಿ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ವೇತನ ನೀಡಬೇಕೆಂದು ಒಂದಾಗಿ ಹೋರಾಟ ಮಾಡಿ ಅದರಲ್ಲಿ ಜಯ ಸಾಧಿಸಿದ ದಿನವನ್ನು ಪ್ರತಿ ವರ್ಷ ಮೇ1 ರಂದು ಕಾರ್ಮಿಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಪ್ರತಿನಿತ್ಯ ಕಾರ್ಮಿಕರು ಮತ್ತು ಶ್ರಮ ಜೀವಿಗಳು ಕೆಲಸ ಮಾಡುವ ಸ್ಥಳದಲ್ಲಿ ಅಗತ್ಯ ಸವಲತ್ತು ಮತ್ತು ಅನುಕೂಲ ದೊರೆಯದೆ ಅಡಚಣೆ, ಅಪಮಾನ, ದೌರ್ಜನ್ಯ, ವಂಚನೆ ನಡೆದಲ್ಲಿ ಕಾರ್ಮಿಕ ಇಲಾಖೆ ಮತ್ತು ನ್ಯಾಯಾಲಯದ ಮೊರೆ ಹೋಗಿ ಸೂಕ್ತ ಅನುಕೂಲ ಪಡೆಯಬಹುದು ಎಂದು ಸಲಹೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ಮಾತನಾಡಿ, ಕಾಲದಿಂದ ಕಾಲಕ್ಕೆ ಕಾನೂನು ಬದಲಾಗುತ್ತಿದ್ದು, ಅದನ್ನು ಅರಿತು ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಮತ್ತು ಕಾನೂನನ್ನು ಗೌರವಿಸಿ ಇತರರಿಗೂ ಆ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾರ್ಗದರ್ಶನ ಮಾಡಿದರು.

ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಎಸ್.ಎನ್.ನರಗುಂದ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್, ಕಾರ್ಮಿಕ ನಿರೀಕ್ಷಕ ಎಚ್.ಕೆ.ಗೋವಿಂದರಾಜ್ ಯಾಧವ್, ವಕೀಲೆ ವೇದಾವತಿ ಕಾರ್ಮಿಕರಿಗೆ ದೊರಕುವ ಸರ್ಕಾರಿ ಸವಲತ್ತುಗಳ ವಿವರಿಸಿದರು. ಕಾರ್ಮಿಕ ಇಲಾಖೆಯ ಸಹಾಯಕ ಚಂದ್ರಕಾಂತ್, ತಿರುಮಲ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net