

ಉತ್ತರಕನ್ನಡ: ಸತ್ತ ಮೇಲೆ ಮಣ್ಣಾಗುವುದು ಸಹಜ. ಆದರೆ ಇಲ್ಲೊಬ್ಬ ಕಾರ್ಮಿಕ ಜೀವಂತ ಮಣ್ಣಾಗಿದ್ದಾನೆ. ಅರ್ಥಾತ್, ಕೆಲಸ ಮಾಡುತ್ತಲೇ ಮಣ್ಣಿನ ರಾಶಿಯಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಚೌಡಗೇರಿ ಎಂಬಲ್ಲಿ ಇಂದು ಈ ಅವಘಡ ಸಂಭವಿಸಿದೆ. ಮೋಹನದಾಸ ನಾಯಕ್ ಎಂಬಾತ ಮಣ್ಣಿನಡಿ ಸಿಲುಕಿ ಸಾವಿಗೀಡಾದ ಕಾರ್ಮಿಕ.
ಜೆಸಿಬಿ ಯಂತ್ರದಿಂದ ಮಣ್ಣು ತೆಗೆಯುವಾಗ ಗುಡ್ಡ ಕುಸಿದು ಈ ದುರ್ಘಟನೆ ಸಂಭವಿಸಿದೆ. ಜೆಸಿಬಿ ಚಾಲಕ ಮನೋಜ್ ಎಂಬಾತನ ಅಚಾತುರ್ಯದಿಂದ ಈ ಸಾವು ಸಂಭವಿಸಿದೆ ಎನ್ನಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.