ಜಿಲೆಟಿನ್​ ಸ್ಫೋಟಗೊಂಡು ಕಾರ್ಮಿಕ ಸಾವು

IMG-20251004-WA0062
Published on

* ಒಬ್ಬನ ಕಾಲು ತುಂಡು, ಇನ್ನಿಬ್ಬರು ಗಂಭೀರ

* ಸಿಡಿಲು ಬಡಿದು ಅವಡ?

ಬಿಡದಿ

ಸಮೀಪದ ಉರಗಹಳ್ಳಿ ಕ್ರಷರ್​ನಲ್ಲಿ ಕಲ್ಲು ಬಂಡೆ ಸಿಡಿಸಲು ಅಳವಡಿಸುತ್ತಿದ್ದ ಜಿಲೆಟಿನ್​ ಸ್ಫೋಟಗೊಂಡು ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬನ ಕಾಲು ತುಂಡಾಗಿದೆ, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಜಾರ್ಖಂಡ್​ ಮೂಲದ ಕಿಶನ್​ ನುನೀಯಾ(45) ಮೃತ. ಸುಬೋಧ್​ಪ್ರಸಾದ್​ ಕಾಲು ತುಂಡಾಗಿದ್ದು, ವಿಶಾಲ್​ ಕುಮಾರ್​ರವಾನಿ, ಸಾಮೂಲ್​ ಅನ್ಸಾರಿ ಎಂಬುವವರು ಗಂಭೀರ ಗಾಯಗೊಂಡು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿಡಿಲ ಹೊಡೆತಕ್ಕೆ ಸ್ಫೋಟ?

ಉರಗಹಳ್ಳಿ ಬಳಿಯ ಕ್ರಷರ್​ನಲ್ಲಿ ನಜುಮುದ್ದೀನ್​ ಬ್ಲ್ಯಾಸ್ಟ್​ರ್​ಆಗಿದ್ದ, ಶುಕ್ರವಾರ ಸಂಜೆ ಕಿಶನ್​ ಸೇರಿ ಒಟ್ಟು ನಾಲ್ವರು ಬಂಡೆಗಳನ್ನು ಸಿಡಿಸಲು 25 ಕೆಜಿ ತೂಕದ 3 ಜಿಲೆಟಿನ್​ ಬಾಕ್ಸ್​ ಹಾಗೂ 1 ಡೆಟೋನೇಟರ್​ಗೆ ವೈರ್​ ಅಳವಡಿಸಿ ಸ್ಫೋಟಿಸಲು ಸಿದ್ಧತೆ ಮಾಡಿದ್ದರು. ಇದೇ ವೇಳೆ ಮಳೆ ಬರುವ ಮುನ್ಸೂಚನೆ ಕಂಡು ನಜುಮುದ್ದೀನ್​ ಬೇಗ ಜಿಲೆಟಿನ್​ ಅಳವಡಿಸಿ ಎಂದು ಕಾರ್ಮಿಕರಿಗೆ ಸೂಚಿಸುತ್ತಿದ್ದ, ಅಷ್ಟರಲ್ಲೇ ಮಳೆ ಬಂದು ಸಿಡಿಲು ಬಡಿದು ಜಿಲೆಟಿಲ್​ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ.

ಆದರೆ, ಸಿಡಿಲ ಹೊಡೆತಕ್ಕೆ ಜಿಲೆಟಿನ್​ ಬ್ಲ್ಯಾಸ್ಟ್​ ಆಗಿದೆಯೇ ಅಥವಾ ಬ್ಲ್ಯಾಸ್ಟ್​ರ್​ನ ಅಜಾಗರೂಕತೆಯಿಂದ ಜಿಲೆಟಿನ್​ ಸ್ಫೋಟಿಸಿದೆಯೇ ಎಂಬುದು ತನಿಖೆ ನಂತರವಷ್ಟೇ ತಿಳಿಯಬೇಕಿದೆ. ಟನಾ ಸ್ಥಳಕ್ಕೆ ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಶ್ರೀನಿವಾಸ್​, ಸಿಪಿಐ ಶಂಕರ್​ ನಾಯಕ್​ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಷರ್​ಗಳ ತಾಣ

ಬಿಡದಿ ಪಟ್ಟಣ ಒಂದು ರೀತಿ ಕ್ರಷರ್​ಗಳ ತಾಣವಾಗಿದೆ. ಅದರಲ್ಲೂ ಉರಗಹಳ್ಳಿ ಗ್ರಾಮವೊಂದರಲ್ಲೇ ಹತ್ತಾರು ಕ್ರಷರ್​ಗಳಿವೆ. ಕೆಲಸ ಮಾಡುವ ಬಹುತೇಕ ಕಾರ್ಮಿಕರು ಹೊರ ರಾಜ್ಯದವರೇ ಆಗಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಬಿಹಾರ, ಜಾರ್ಖಂಡ್​, ಉತ್ತರ ಪ್ರದೇಶದಿಂದ ಕಾರ್ಮಿಕರನ್ನು ಕರೆತರಲಾಗುತ್ತಿದೆ.

ಮಳೆಯಲ್ಲಿ ಜಿಲೆಟಿನ್​ ಅಳವಡಿಸುವಂತಿಲ್ಲ!

ಕ್ರಷರ್​ಗಳಲ್ಲಿ ಕಲ್ಲು ಬಂಡೆಗಳನ್ನು ಬ್ಲ್ಯಾಸ್ಟ್​ ಮಾಡುವುದು ಮುಖ್ಯವಾದ್ದರಿಂದ ಇದಕ್ಕೆಂದೇ ನುರಿತ ಬ್ಲ್ಯಾಸ್ಟ್​ರ್​ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಮಳೆ ಬರುವ ಸೂಚನೆಯಿದ್ದರೆ ಬಂಡೆಗಳನ್ನು ಸಿಡಿಸಲು ಜಿಲೆಟಿನ್​ ಕಡ್ಡಿಗಳನ್ನು ಅಳವಡಿಸುವಂತಿಲ್ಲ. ಮಳೆ ವಾತಾವರಣ ಕಂಡು ಬಂದಿದ್ದರೂ ಏಕೆ ಸ್ಫೋಟಕಗಳನ್ನು ಅಳವಡಿಸುತ್ತಿದ್ದರು? ಎಂಬುದು ಅನುಮಾನ ಮೂಡಿಸಿದೆ.

ಸ್ಫೋಟವಾಗದವು ನಿಷ್ಕ್ರಿಯ

ಕ್ರಷರ್​ನಲ್ಲಿ ಬಂಡೆಗಳನ್ನು ಸಿಡಿಸಲು ಅಳವಡಿಸಿದ್ದ 3 ಬಾಕ್ಸ್​ ಜಿಲೆಟಿನ್​ ಕಡ್ಡಿಗಳ ಪೈಕಿ ಒಂದು ಭಾಗದಲ್ಲಷ್ಟೇ ಸ್ಫೋಟಗೊಂಡಿದ್ದು, ಉಳಿದ ಕಡೆ ಸಿಡಿಮದ್ದು ಸ್ಫೋಟಗೊಂಡಿರಲಿಲ್ಲ. ಹಾಗಾಗಿ ಪೊಲೀಸರು ಶನಿವಾರ ನ್ಯಾಯಾಲಯದ ಅನುಮತಿ ಪಡೆದು ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿಯಿಂದ, ಸ್ಫೋಟವಾಗದಿರುವ ಜಿಲೆಟಿನ್​ ಕಡ್ಡಿ ಹಾಗೂ ಡೆಟೋನೇಟರ್​ಗಳನ್ನು ನಿಷ್ಕ್ರಿಯಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net