

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಚನ್ನಮಾನಹಳ್ಳಿಯಲ್ಲಿ ವಿದ್ಯುತ್ ಪ್ರವಹಿಸಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಚಾಮರಾಜನಗರ ಜಿಲ್ಲೆ ಕೆಂಪನಪುರ ಗ್ರಾಮದ ಚಿನ್ನಸ್ವಾಮಿ (45) ಮೃತ.
ಚನ್ನಮಾನಹಳ್ಳಿ ರೈಲ್ವೆ ಬ್ರಿಡ್ಜ್ ಹತ್ತಿರದ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಶಾಲೆ ಸಮೀಪ ಹಾದು ಹೋಗಿರುವ 11 ಕಿಲೋ ವಾಟ್ ತಂತಿ ಬದಲಿಸಿ ಬನ್ನಿಕುಪ್ಪೆ ವಿದ್ಯುತ್ ಉಪ ಕೇಂದ್ರದಿಂದ ಕವರ್ ಕೇಬಲ್ ಹೊದಿಕೆ ಇರುವ ತಂತಿ ಅಳವಡಿಸುವ ಕೆಲಸ ನಿರ್ವಹಿಸುತ್ತಿದ್ದಾಗ ಅವಘಡ ಸಂಭವಿಸಿದೆ.
ಕೆಲಸಕ್ಕೆಂದು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರೂ ವಿದ್ಯುತ್ ಪ್ರವಹಿಸಿದ ಪರಿಣಾಮ ಚಿನ್ನಸ್ವಾಮಿ ಕಂಬದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬೆಸ್ಕಾಂ ಲೈನ್‌ಮನ್ ಸೇರಿ ಆರು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಚಿನ್ನಸ್ವಾಮಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಕೂಲಿ ಅರಸಿ ಬಂದಿದ್ದ ಚಿನ್ನಸ್ವಾಮಿ ಗುತ್ತಿಗೆದಾರರ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಸಂಜೆ ವೇಳೆಗೆ ಮೃತನ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಶವಾಗಾರದ ಮುಂದೆ ಜಮಾಯಿಸಿದ್ದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.