

ಮಾಗಡಿ : ತಾಲೂಕಿನ ಸೂರಪ್ಪನಹಳ್ಳಿ ಬಳಿ ವಿದ್ಯುತ್ ತಂತಿ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾಲೂಕಿನ ನಾರಸಂದ್ರದ ನಿವಾಸಿ ಸಿದ್ದಲಿಂಗ (ಪುಟ್ಟರಾಜು) (35) ಮೃತ. ಪುಟ್ಟರಾಜು ಎಲೆಕ್ಟ್ರಿಕಲ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ತಾಲೂಕಿನ ಸೂರಪ್ಪನಹಳ್ಳಿ ಗ್ರಾಮದ ಬಳಿ ವಿದ್ಯುತ್ ಜಂಪು ಕಟ್ಟಾಗಿದ್ದನ್ನು ದುರಸ್ತಿ ಪಡಿಸಲು ಭಾನುವಾರ ಗುತ್ತಿಗೆದಾರ ಜತೆ ತೆರಳಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಕಂಬದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಕುಣಿಗಲ್ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ: ಈ ವೇಳೆ ಮೃತನ ಕುಟುಂಬಸ್ಥರು ಶವವನ್ನು ಕುದೂರು ಬೆಸ್ಕಾಂ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಇಇ ನಟರಾಜು, ಬೆಸ್ಕಾಂ ಎಇಇ ಶಿವರಾಜು ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನಹೊಲಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಮುಖಂಡ ಜಯರಾಮು, ಮರೂರು ಜಯರಾಮು, ಬಾಬಣ್ಣ ಇದ್ದರು. ತಾಲೂಕಿನಾದ್ಯಂತ ಆಗಾಗ್ಗೆ ಇಂತಹ ದುರ್ಘಟನೆಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೆ ಬೇಜವಾಬ್ದಾರಿಯಿಂದ ವಿದ್ಯುತ್ ಗುತ್ತಿಗೆದಾರರ ಬಳಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಜೀವ ಕಳೆದುಕೊಳ್ಳುವಂತಾಗಿದೆ ಎಂದು ತಾಲೂಕು ಬೆಸ್ಕಾಂ ಗುತ್ತಿಗೆದಾರ ಸಂಘದ ಅಧ್ಯಕ್ಷ ಸಿದ್ದರಾಜು ದೂರಿದರು.
ಇಲಾಖೆಯಿಂದ ನೀಡಬಹುದಾದ ಪರಿಹಾರವನ್ನು ಮೃತ ಕುಟುಂಬಸ್ಥರಿಗೆ ನೀಡಲಾಗುವುದು. ಮುಂದೆ ಇಂತಹ ಘಟನೆ ನಡೆಯಂದೆ ಕ್ರಮಕೈಗೊಳ್ಳಲಾಗುವುದು. -ನಟರಾಜು, ಬೆಸ್ಕಾಂ ಇಇ