ಎಂ.ಎಸ್. ಸಿದ್ದಲಿಂಗೇಶ್ವರ. ಮಾಗಡಿ
ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಜತೆಗೆ ನೂರೆಂಟು ವಿಘ್ನಗಳು ಎದುರಾಗಿದೆ. ಕೂಡಲೇ ಈ ಕಾಮಗಾರಿಗೆ ವೇಗ ನೀಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆಗೆ ಮಂಚನಬೆಲೆ, ವೈಜಿ ಗುಡ್ಡ ಜಲಾಶಯದಿಂದ ಶುದ್ಧ ಕುಡಿಯುವ ನೀರು ಪೂರೈಸುವ 810 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಯೋಜನೆ ಇದಾಗಿದೆ. ಯೋಜನೆಯಲ್ಲಿ ಕನಿಷ್ಠ 55 ಲೀ ಕುಡಿಯುವ ನೀರು ಪೂರೈಸಲು 210 ಓವರ್‌ಹೆಡ್ ಟ್ಯಾಂಕ್ ನಿರ್ಮಾಣ, ಪ್ರತಿ ನಿಮಿಷಕ್ಕೆ 10 ರಿಂದ 15 ಲೀ. ನೀರು ಪೂರೈಕೆ ಮಾಡಲಾಗುವುದು.
ಜನವಸತಿ ಹಾಗೂ ಕಂದಾಯ ಸೇರಿ 712 ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಲು 3 ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. 70 ಗುತ್ತಿಗೆದಾರರು ಟೆಂಡರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 150 ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಮತ್ತು ಟೆಂಡರ್ ಪಡೆದವರು ಕಾಮಗಾರಿ ಆರಂಭಿಸದೆ ಇರುವುದರಿಂದ ಈ ಯೋಜನೆ ಕುಂಠಿತವಾಗಿದೆ.
ಗುತ್ತಿಗೆದಾರರಿಗೆ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿಪಡಿಸಲಾಗಿದೆ. ಪೂರ್ಣಗೊಳಿಸದಿದ್ದರೆ ನೋಟಿಸ್ ನೀಡುವುದಲ್ಲದೇ, ದಿನಕ್ಕೆ ಇಂತಿಷ್ಟು ಎಂಬಂತೆ ದಂಡ ವಿಧಿಸಲಾಗುವುದು. ಕಾಮಗಾರಿ ಆರಂಭಿಸದ 10ಕ್ಕೂ ಹೆಚ್ಚು ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಸಂಬಂಧ ಮರು ಟೆಂಡರ್ ಕರೆಯಲು ಸಂಬಂಧಪಟ್ಟ ಇಲಾಖೆ ಮುಂದಾಗಿದೆ.
ಈಗಾಗಲೇ ಟೆಂಡರ್ ಪಡೆದ ಗುತ್ತಿಗೆದಾರರು ಏಪ್ರಿಲ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಅಧಿಕಾರಿಗಳು ಒತ್ತಡ ಹೇರಿದ್ದಾರೆ. ಆದರೆ ಗ್ರಾಮಗಳಲ್ಲಿ ಕಾಮಗಾರಿ ಮಾಡುವ ವೇಳೆ ಸ್ಥಳೀಯರು ಗುತ್ತಿಗೆದಾರರಿಗೆ ಪ್ರಶ್ನಿಸಿದರೆ ನಯವಾಗಿ ಜಾರಿಗೊಳ್ಳುತ್ತಾರೆ. ಆದರೆ, ಪ್ರತಿತಿಂಗಳು ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸಭೆ ನಡೆಸುತ್ತಿದ್ದಾರೆ. ಎರಡೂವರೆ ಅಡಿ ಆಳದಲ್ಲಿ ಗುಣಮಟ್ಟದ ಪೈಪ್ ಅಳವಡಿಸಬೇಕು ಎಂಬ ಆದೇಶವಿದೆ. ಆದರೆ, ಕೆಲವೆಡೆಗಳಲ್ಲಿ ಒಂದೂವರೆ ಅಡಿಯಲ್ಲಿ ಕಳಪೆ ಪೈಪ್ ಅಳವಡಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದೆ.
ತಾಲೂಕಿನಾದ್ಯಂತ ರಸ್ತೆ ಬದಿಗಳಲ್ಲಿ ಅಳವಡಿಸಲಾಗುತ್ತಿರುವ ಪೈಪ್‌ಲೈನ್ ಕಾಮಗಾರಿ ವೇಳೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಿಲ್ಲ. ಕಾಮಗಾರಿಗೆ ತೆಗೆದ ಗುಂಡಿಗಳನ್ನು ಮುಚ್ಚದೆ ಇರುವುದರಿಂದ ವಾಹನ ಸವಾರರಿಗೆ ತೊಂದರೆ ಮತ್ತು ಅಪಘಾತಗಳು ಸಂಭವಿಸುತ್ತ್ತಿದೆ. ಗ್ರಾಮಗಳ ಮನೆಗಳಿಗೆ ಕೊಳಾಯಿ ಸಂಪರ್ಕಕ್ಕೆ ಕಾಂಕ್ರಿಟ್ ರಸ್ತೆ ಕಿತ್ತು ಹಾಕಿದ್ದು, ತಿಂಗಳು ಕಳೆದರೂ ಗುಂಡಿಗಳನ್ನು ಮುಚ್ಚಿಲ್ಲ. ಇದರಿಂದ ವೃದ್ಧರು ರಾತ್ರಿ ವೇಳೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿ ಮನೆಗೂ ನುಗ್ಗುತ್ತದೆ ಎನ್ನುವುದು ನಾಗರಿಕರ ಆರೋಪವಾಗಿದೆ.