

ಹಾಸನ: ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಲ್ಲಿ ಮಾತ್ರ ಸಹಕಾರ ಸಂಘಗಳು ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಶ್ರವಣಬೆಳಗೂಳ ಶಾಸಕ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಗಮ ಬೆಂಗಳೂರು, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಹಾಸನ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಸಹಕಾರ ಇಲಾಖೆ ಸಹಯೋಗದಲ್ಲಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಿಬ್ಬಂದಿಗೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ಸಿಬ್ಬಂದಿ ನಗು ಮುಖದಿಂದ ಗ್ರಾಹಕರನ್ನು ಸ್ವಾಗತಿಸಿ, ವಿಶ್ವಾಸಾರ್ಹತೆಯುಳ್ಳ ಸೇವೆ ನೀಡಬೇಕು. ಒಳ್ಳೆಯ ಕೆಲಸಗಳನ್ನು ನಾಳೆಗೆ ಮುಂದೂಡದೇ ಇಂದೇ ಮಾಡಿ ಮುಗಿಸಿದ್ದಲ್ಲಿ ಅಭಿವೃದ್ಧಿ ಸಾಧ್ಯ ಎಂದರು.
ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಮಾತನಾಡಿ, ಇಂದು ಬ್ಯಾಂಕಿನಲ್ಲಿ ವಿವಿಧ ಸೇವೆಗಳ ಕುರಿತು ಗ್ರಾಹಕರಲ್ಲಿ ಅನೇಕ ಗೊಂದಲಗಳಿದ್ದು, ಬ್ಯಾಂಕಿನ ಸಿಬ್ಬಂದಿ ನಗು ಮುಖದಿಂದ ಗ್ರಾಹಕರನ್ನು ಕಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇ ಆದಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಿದಂತಾಗುತ್ತದೆ. ಕೇಂದ್ರದಲ್ಲಿ ಸಹಕಾರ ಇಲಾಖೆ ಕಾರ್ಯ ಆರಂಭ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಹೊಸ ಆಯಾಮ ದೊರೆಯುತ್ತದೆ ಎಂದರು.
ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ಎನ್. ಪ್ರಕಾಶ್, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಯಕರಶೆಟ್ಟಿ ಬಿ.ಇಂದ್ರಾಳಿ, ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ನವೀನ್, ಜಿಲ್ಲಾ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಜೆ. ಕಾಂತರಾಜು ಇತರರು ಇದ್ದರು.