

ಕಡಬ: ಗೃಹರಕ್ಷಕ ಸಿಬ್ಬಂದಿ ಕೂಡ ತಮ್ಮೆಲ್ಲ ಸಮಸ್ಯೆಗಳನ್ನು ಮರೆತು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಗೃಹರಕ್ಷಕ ದಳದ ದ.ಕ.ಜಿಲ್ಲಾ ಕಮಾಂಡೆಂಟ್ ಡಾ.ಮುರಲೀಮೋಹನ ಚೂಂತಾರು ಹೇಳಿದರು.
ಕಡಬದಲ್ಲಿ ಗೃಹರಕ್ಷಕದ ದಳದ ಸ್ವಂತ ನಿವೇಶನದಲ್ಲಿ ಕರ್ಣಾಟಕ ಬ್ಯಾಂಕ್ ಸಿಎಸ್‌ಆರ್ ನಿಧಿಯ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಗೃಹರಕ್ಷಕ ದಳದ ಕಡಬ ಘಟಕದ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗೂ ಪುತ್ತೂರು ಕ್ಲಸ್ಟರ್ ಹೆಡ್ ಶ್ರೀಹರಿ ಪಿ.ಮಾತನಾಡಿ, ಕರ್ಣಾಟಕ ಬ್ಯಾಂಕ್ ಕೇವಲ ಲಾಭದಾಯಕ ಆರ್ಥಿಕ ವ್ಯವಹಾರವನ್ನಷ್ಟೇ ಗುರಿಯಾಗಿರಿಸಿಕೊಂಡಿಲ್ಲ. ಗ್ರಾಹಕರಿಗೆ ಉತ್ತಮ ಆರ್ಥಿಕ ಸೇವೆಯನ್ನು ನೀಡುವ ಜತೆಗೆ ಸಮಾಜ ಸೇವೆಯನ್ನು ಮಾಡುವ ಬದ್ಧತೆಯನ್ನು ಕೂಡ ನಿರಂತರವಾಗಿ ಪ್ರದರ್ಶಿಸುತ್ತಿದೆ. ಅದಕ್ಕೆ ಉದಾಹರಣೆಯಾಗಿ ಗೃಹರಕ್ಷಕ ದಳದ ಕಡಬ ಘಟಕಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಬ್ಯಾಂಕ್ ವತಿಯಿಂದ ಅನುದಾನ ನೀಡಿದ್ದೇವೆ ಎಂದರು.
ನಿವೃತ್ತ ಸೈನ್ಯಾಧಿಕಾರಿ, ಕಡಬ ಗೃಹರಕ್ಷಕ ದಳದ ಮಾಜಿ ಘಟಕಾಧಿಕಾರಿ ಟಿ.ಜಿ.ಮ್ಯಾಥ್ಯೂ, ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ನಿವೃತ್ತ ಮುಖ್ಯಶಿಕ್ಷಕ ಜನಾರ್ದನ ಗೌಡ ಪಣೆಮಜಲು, ಕಡಬ ಪಟ್ಟಣ ಪಂಚಾಯಿತಿ ಬಂದಿ ಹರೀಶ್ ಬೆದ್ರಾಜೆ ಶುಭ ಹಾರೈಸಿದರು.
ಕರ್ನಾಟಕ ಬ್ಯಾಂಕ್ ಕಡಬ ಶಾಖಾ ವ್ಯವಸ್ಥಾಪಕ ಕೃಷ್ಣ ಪ್ರಶಾಂತ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚೆನ್ನಪ್ಪ ಗೌಡ, ಕಡಬ ಸಿಎ ಬ್ಯಾಂಕ್ ನಿರ್ದೇಶಕ ಸತೀಶ್ ನಾಕ್ ಮೇಲಿನಮನೆ, ಇಂಜಿನಿಯರ್ ಶ್ರೀಗಿರಿ ತಮ್ಮಯ್ಯ, ಹಿರಿಯ ಗೃಹರಕ್ಷಕರಾದ ಉದಯಶಂಕರ್, ಜಯಪ್ರಕಾಶ್, ದಯಾನಂದ್ ಹಾಗೂ ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿ ಹರೀಶ್ ಆಚಾರ್, ಉಪ್ಪಿನಂಗಡಿ ಘಟಕದ ಎಸ್.ಎಲ್.ದಿನೇಶ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗೃಹರಕ್ಷಕ ದಳದ ದ.ಕ.ಜಿಲ್ಲಾ ಕಮಾಂಡೆಂಟ್ ಡಾ.ಮುರಲೀಮೋಹನ ಚೂಂತಾರು ಹಾಗೂ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಝಿಯಾರ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಗೃಹರಕ್ಷಕ ಸುಂದರ ಪಾಲೋಳಿ ಸ್ವಾಗತಿಸಿ, ಕಡಬ ಗೃಹರಕ್ಷಕ ದಳದ ಘಟಕಾಧಿಕಾರಿ ತೀರ್ಥೇಶ್ ಅಮೈ ವಂದಿಸಿದರು. ಸುಕೇಶ್ ಕುಮಾರ್ ನಿರೂಪಿಸಿದರು.