

ಗಂಗಾಧರ್ ಬೈರಾಪಟ್ಟಣ ರಾಮನಗರ
ಮನೆಯಲ್ಲಿಯೇ ಕುಳಿತು ಕೆಲಸ ಮಾಡಿರಿ, ಕೈ ತುಂಬಾ ಹಣ ಗಳಿಸಿ... ಗೃಹಿಣಿಯರಿಗೆ ಹೇಳಿ ಮಾಡಿಸಿದ ಕೆಲಸ... ತಡ ಮಾಡಬೇಡಿ, ಇಂತಹ ಅವಕಾಶ ಮತ್ತೆ ಸಿಗುವುದಿಲ್ಲ... ಎನ್ನುವ ಬಣ್ಣದ ಮಾತುಗಳಿಗೆ ಮರುಳಾದರೆ ಕಷ್ಟಪಟ್ಟು ದುಡಿದ ಹಣವೂ ನಿಮ್ಮ ಕೈಬಿಟ್ಟು ಹೋಗುವುದರಲ್ಲಿ ಅನುಮಾನ ಇಲ್ಲ.
ಇತ್ತೀಚೆಗೆ ವರ್ಕ್ ಫ್ರಂ ಹೋಮ್ ಹೆಸರಲ್ಲಿ ಗೃಹಿಣಿಯರನ್ನು ವಂಚಿಸುವ ಜಾಲ ವ್ಯಾಪಕ ರೂಪ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿಯೂ ವ್ಯಾಪಿಸಿದೆ. ಇದೀಗ ಒಂದೇ ದಿನ ಮೂವರು ಈ ರೀತಿಯ ವಂಚನೆಗೆ ಸಿಲುಕಿದ್ದು, ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರಕರಣದ ಒಂದು
ಕನಕಪುರದಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಇತ್ತೀಚೆಗೆ ಕೆಲಸ ಬಿಟ್ಟಿದ್ದ ಮಹಿಳೆಯೊಬ್ಬರು ಹಣ ಗಳಿಸುವ ಆಸೆಯಿಂದ ಈ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. flightnetwork.agent.com ಹೆಸರಿನ ವೆಬ್‌ಸೈಟ್ ತಮಗೆ ವರ್ಕ್ ಫ್ರಂ ಹೋಂ ಕೆಲಸ ಕೊಡಿಸುವುದಾಗಿ ಹೇಳಿ ಮೊದಲಿಗೆ 10 ಸಾವಿರ ರೂ.ಗಳನ್ನು ಮಹಿಳೆಯಿಂದ ಪಡೆದುಕೊಂಡಿದೆ.
ನಂತರ ಎರಡು ಸಾವಿರ ರೂ.ಗಳ ಬೋನಸ್ ನೀಡಿದೆ. ಇದರಿಂದ ಉತ್ತೇಜಿತರಾದ ಮಹಿಳೆಗೆ ಕಾರ್ಡ್ ಮಾಡಿಸಿಕೊಳ್ಳಬೇಕು, ರೀಚಾರ್ಜ್ ಮಾಡಿಕೊಳ್ಳಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟು ಸುಮಾರು 1.45 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕವೇ ವಂಚಕರು ಲಪಟಾಯಿಸಿದ್ದಾರೆ. ಆ ನಂತರ ಮಹಿಳೆ ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಕನಕಪುರ ಪೊಲೀಸರಿಗೆ ದೂರು ನೀಡಿ ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದಾರೆ.
ಪ್ರಕರಣ ಎರಡು
ವಾಟ್ಸ್ ಆಪ್ ಸಂದೇಶಕ್ಕೆ ಬೆರಗಾಗಿ ಹಣ ಕಳೆದುಕೊಂಡ ಚನ್ನಪಟ್ಟಣದ ಮಹಿಳೆಗೆ ವಾಟ್ಸ್‌ಆಪ್ ಸಂದೇಶ ಕಳುಹಿಸಿ ವರ್ಕ್ ಫ್ರಂ ಹೋಂ ಎನ್ನುವ ಆಸೆ ಹುಟ್ಟಿಸಿದ್ದಾರೆ. ಟಾಸ್ಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ಹೇಳಿ ಮಹಿಳೆಯಿಂದ ಕ್ರಮವಾಗಿ 1, 5, 7 ಸಾವಿರ ರೂ.ಗಳನ್ನು ವಿವಿಧ ಐಡಿಗಳಿಗೆ ಹಾಕಿಸಿಕೊಂಡು ಟಾಸ್ಕ್ ಖರೀದಿಸಲು ಹೇಳಿದ್ದಾರೆ. ಮೊದಲಿಗೆ ಹಣ ಕಟ್ಟಿದ ಮಹಿಳೆಗೆ ಮತ್ತೆ ನೀವು ಹಣ ವಾಪಸ್ ಪಡೆಯಬೇಕಾದರೆ ಮತ್ತೆ ಹಣ ಕಟ್ಟಬೇಕು ಎನ್ನುವ ಸೂಚನೆ ನೀಡಿದ್ದಾರೆ. ಇದನ್ನು ನಂಬಿದ ಮಹಿಳೆ 5.43 ಲಕ್ಷ ರೂ.ಗಳನ್ನು ತಮ್ಮ ವಿವಿಧ ಖಾತೆಗಳಿಂದ ವಂಚಕರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿದ್ದಾರೆ. ನಂತರ ಹಣವೂ ಇಲ್ಲದೆ, ಮೋಸ ಹೋಗಿರುವುದು ತಿಳಿದು ಸೆನ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ಮೂರು
ಆನ್‌ಲೈನ್ ಮೂಲಕವೇ ಕಂಪನಿಯೊಂದಕ್ಕೆ ಸಹಾಯಕ ವ್ಯವಸ್ಥಾಪಕರಾಗಿ ನೇಮಕಗೊಂಡು ಮೋಸ ಹೋದ ಕತೆ. ಚನ್ನಪಟ್ಟಣದ ಹೊಟ್ಟಿಗನಹೊಸಳ್ಳಿ ಮಹಿಳೆಗೆ ಇತ್ತೀಚೆಗೆ ಇನ್‌ಸ್ಟಾ ಗ್ರಾಂ ಮೂಲಕ ಆಲ್‌ಫೆನ್ ಎನ್ನುವ ಕಂಪನಿಯಿಂದ ಕೆಲಸದ ಆಫರ್ ಬಂದಿದೆ. ಇದನ್ನು ನಂಬಿದ ಮಹಿಳೆ ತಮ್ಮ ಬಯೋಡೇಟಾ ನೀಡಿ ಕೆಲಸಕ್ಕೂ ಸೇರಿದ್ದಾರೆ.
ನಂತರ ಹೂಡಿಕೆದಾರರು ಇವರ ಖಾತೆಗೆ ಹಣ ಹಾಕುತ್ತಿದ್ದರು, ಈ ಹಣವನ್ನು ಆಲ್‌ಫೆನ್ ಎನ್ನುವ ಕಂಪನಿ ಹೇಳಿದ ಖಾತೆಗೆ ಜಮಾ ಮಾಡುತ್ತಿದ್ದರು. ಇದಾದ ನಂತರ ಕಂಪನಿ ವಂಚನೆಗೊಳಗಾದ ಮಹಿಳೆಗೆ ಹಣ ಹೂಡುವಂತೆ ಒತ್ತಾಯ ಮಾಡಿದ್ದು, ಕಂಪನಿ ಬಗ್ಗೆ ನಂಬಿಕೆಯಿಂದ ಇದ್ದ ಮಹಿಳೆ ಸೆ.1ರಿಂದ 7ರವರೆಗೆ 4.94 ಲಕ್ಷ ರೂ.ಗಳನ್ನು ಕಟ್ಟಿದ್ದಾರೆ. ಹಣ ಹೂಡಿಕೆ ಮಾಡಿದ ನಂತರ ಇವರಿಗೆ ಯಾವುದೇ ಹಣ ಬಾರದೇ ಇದ್ದುದರಿಂದ ಅನುಮಾನಗೊಂಡು ಇವರು ಬಳಕೆ ಮಾಡುತ್ತಿದ್ದ ವೆಬ್‌ಸೈಟ್‌ಗಳನ್ನು ಚೆಕ್ ಮಾಡಲಾಗಿ, ಅವರು ತೆರೆದಿಲ್ಲ. ಇದರಿಂದ ಮೋಸ ಹೋಗಿರುವುದು ಗೊತ್ತಾಗಿ ನ್ಯಾಯಕ್ಕಾಗಿ ಸೆನ್ ಠಾಣೆ ಮೆಟ್ಟಿಲೇರಿದ್ದಾರೆ.
ವಿಜಯವಾಣಿ ಕಳಕಳಿ
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ವ್ಯಾಪಕ ರೂಪ ಪಡೆದುಕೊಂಡಿದೆ. ಪೊಲೀಸ್ ಇಲಾಖೆ ಸಹ ಸೈಬರ್ ಕ್ರೈಂಗಳ ಬಗ್ಗೆ ಆಗಾಗ ಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದರೂ, ಮೋಸ ಮಾಡುವವರು ಹೊಸ ರೂಪದಲ್ಲಿ ಸಕ್ರಿಯವಾಗಿ ಜಾಲವನ್ನು ಇಟ್ಟುಕೊಂಡಿದ್ದಾರೆ.
ಆದರೆ, ಯಾವುದೇ ಶ್ರಮವಿಲ್ಲದೆ ಹೆಚ್ಚಿನ ಹಣ ಗಳಿಸಬೇಕು ಎನ್ನುವುದು ಸೇರಿ ವಿವಿಧ ಕಾರಣಗಳಿಗಾಗಿ ಇಂತಹ ಮೋಸದ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಯಾರೇ ಆಗಲಿ, ತಮಗೆ ಬರುವ ಅಪರಿಚಿತ ಸಂದೇಶಗಳನ್ನು, ಕೆಲಸದ ಆಫರ್‌ಗಳನ್ನು ಕಣ್ಣು ಮುಚ್ಚಿ ನಂಬಬೇಡಿ. ಇದರಿಂದ ಕಷ್ಟಪಟ್ಟು ಸಂಪಾದಿಸಿದ ಹಣ ವಂಚಕರ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ.