

ಚನ್ನಗಿರಿ: ಇಲ್ಲಿನ ಕುರುಬರ ಬೀದಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2020-21ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಗರಡಿ ಮನೆಗೆ ಉದ್ಘಾಟನೆ ಭಾಗ್ಯವೇ ಒದಗಿ ಬರುತ್ತಿಲ್ಲ.
70 ವರ್ಷ ಹಳೆಯದಾದ ಗರಡಿ ಮನೆ ಶಿಥಿಲಾವಸ್ಥೆಗೆ ತಲುಪಿದ ಕಾರಣ ದುರಸ್ತಿ ಮಾಡುವಂತೆ ಮಾಡಿಕೊಂಡ ಮನವಿ ಮೇರೆಗೆ, ಈ ಹಿಂದಿನ ಶಾಸಕ ಮಾಡಾಳು ವಿರುಪಾಕ್ಷಪ್ಪ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಿದ್ದರು.
ಆದರೆ, ಕಾಮಗಾರಿ ಪೂರ್ಣಗೊಂಡು ಬರೋಬ್ಬರಿ ಎರಡು ವರ್ಷ ಕಳೆದರೂ ಬೀಗ ಹಾಕಿದ ಬಾಗಿಲು ತೆರೆದೇ ಇಲ್ಲ.
ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮದ ಕುಸ್ತಿಪಟುಗಳು ಮತ್ತು ಪೈಲ್ವಾನರು ನಿರ್ಮಾಣ ಮಾಡಿದಂತ ಗರಡಿ ಮನೆ ಬಾಗಿಲು ತೆರೆಯದೆ ಬಿಕೋ ಎನ್ನುತ್ತಿದೆ.
ಯುವಕರು ಸದೃಢ ದೇಹ ಹೊಂದಲು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಇಲ್ಲಿ ತಾಲೀಮು ಮಾಡುತ್ತಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನಾ ಮಾತನಾಡಿ, ಇಲಾಖೆಗೆ ಸಂಬಂಧಿಸಿದ ಅನುದಾನದಲ್ಲಿ ಕಟ್ಟಡ ಪೂರ್ಣಗೊಳಿಸಲಾಗಿದೆ.
ಸಲಕರಣೆ ಖರೀದಿ ಮಾಡಲು ಅನುದಾನ ಮಂಜೂರು ಆಗಿಲ್ಲ. ಆದ್ದರಿಂದ ಸ್ವಲ್ಪ ತಡವಾಗಿದೆ ಎಂದರು.