ಬೆಳಗಾವಿಯಲ್ಲಿ ಉತ್ತರದಾಯಿತ್ವದ ನಿರೀಕ್ಷೆ: ಸುವರ್ಣ ವಿಧಾನಸೌಧದಲ್ಲಿ ಮಾತಿನ ಮಲ್ಲಯುದ್ಧ; ನಾಳೆಯಿಂದ ಚಳಿಗಾಲದ ಅಧಿವೇಶನ

Adhiveshana
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಪ್ರಕೃತಿ ಮುನಿಸು, ಕರೊನಾ ಸೋಂಕಿನ ಕಂಟಕದಿಂದಾಗಿ ಮೂರು ವರ್ಷಗಳ ನಂತರ ಬೆಳಗಾವಿ ಸುವರ್ಣ ವಿಧಾನಸೌಧವು ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಸಾಕ್ಷಿಯಾಗಲಿದೆ. ಪ್ರಜಾತಂತ್ರದ ಉನ್ನತ ವೇದಿಕೆಯು ಉತ್ತರ ಕರ್ನಾಟಕದ ಜನರ ಆಶೋತ್ತರಗಳಿಗೆ ಸ್ಪಂದಿಸಿ, ಕೊರಗು ಮತ್ತು ಕೊರತೆ ನಿವಾರಿಸುವ ‘ಉತ್ತರ’ದಾಯಿತ್ವವನ್ನು ಈ ಭಾಗದ ಜನರು ಬಯಸಿದ್ದಾರೆ. ಕರೊನಾ ಹೊಸ ರೂಪಾಂತರಿ ‘ಒಮಿಕ್ರಾನ್’ ಕರಿಛಾಯೆ ನಡುವೆ ಸೋಮವಾರ (ಡಿ.13) ಆರಂಭವಾಗಲಿರುವ ಕಾರ್ಯಕಲಾಪಕ್ಕೆ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ. ಆ ಮೂಲಕ ಉತ್ತರ ಕರ್ನಾಟಕದ ಜನರ ಅಪೇಕ್ಷೆ-ಆಕಾಂಕ್ಷೆಗಳಿಗೆ ಸ್ಪಂದಿಸಲು ಬದ್ಧವೆಂಬ ಸಂದೇಶ ರವಾನಿಸಿ, ಪ್ರತಿಪಕ್ಷಗಳ ಬಳಿಯಿದ್ದ ‘ನಿರ್ಲಕ್ಷ್ಯ’ದ ಆಪಾದನೆಯಿಂದಲೂ ಪಾರಾಗಿದೆ.

ಸುವರ್ಣಸೌಧದಲ್ಲಿ 10ನೇ ಬಾರಿ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಳಗಾವಿಯದು ಚೊಚ್ಚಲ ಅಧಿವೇಶನವಾಗಿದ್ದರೆ, ಒಟ್ಟಾರೆ ಎರಡನೇ ಬಾರಿ ಅಧಿವೇಶನದ ಸವಾಲು ಎದುರುಗೊಳ್ಳುವರು.

ಮಾತಿನ ಮಲ್ಲಯುದ್ಧ: ಜಾಗತಿಕ ಸೋಂಕು ಮಾರಿಯು ಪದೇಪದೆ ಅಪ್ಪಳಿಸಿ ಆರ್ಥಿಕ, ಅಭಿವೃದ್ಧಿ ಸೃಂಖಲೆಯನ್ನೇ ಬದಲಾಯಿಸಿದ್ದು, ಸದ್ಯಕ್ಕೆ ನಿಗದಿಯಾದ 10 ದಿನಗಳ ಕಾರ್ಯ ಕಲಾಪಗಳಲ್ಲಿ ಮಾತಿನ ಮಲ್ಲಯುದ್ಧ ನಡೆಯುವುದು ನಿಶ್ಚಿತ.

ಕಳೆದ ಬಾರಿ ಧಾರ್ವಿುಕ ಕಟ್ಟಡಗಳ ಸಂರಕ್ಷಣೆ ಮಸೂದೆ ಗದ್ದಲದ ನಡುವೆ ಪಾಸ್ ಆಗಿತ್ತು. ಈ ಬಾರಿ ಮತಾಂತರ ನಿಷೇಧಿಸಲು ಬಯಸಿದ ಖಾಸಗಿ ಮಸೂದೆಯೊಂದು ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳಿವೆ. ಬಲವಂತದ ಮತಾಂತರ ನಿಷೇಧ ಸೂಕ್ತವೆಂದು ಸಚಿವರು, ಆಡಳಿತಪಕ್ಷದ ಕೆಲವು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಮಸೂದೆ ಮಂಡಿಸಿದರೆ ಶತಾಗತಾಯ ವಿರೋಧಿಸಲು ಪ್ರತಿಪಕ್ಷ ತಯಾರಾಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆ ಫಲಿತಾಂಶ ಡಿ.14ರಂದು ಹೊರ ಬೀಳುವ ಸಂಭವವಿದ್ದು, ರಾಜಕೀಯ ಪಕ್ಷಗಳ ಬಲಾಬಲ, ನಾಯಕರ ವರ್ಚಸ್ಸು ಮತ್ತಿತರ ವಿಷಯಗಳು ಬಿಸಿ ಚರ್ಚೆಗೆ ಪುಷ್ಠಿ ನೀಡಲಿವೆ.

ಹಿನ್ನೋಟ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರದ ಅವಧಿಯಲ್ಲಿ 2018 ಡಿಸೆಂಬರ್ 10ರಿಂದ 21ರವರೆಗೆ ಸುವರ್ಣಸೌಧದಲ್ಲಿ ಅಧಿವೇಶನ ನಡೆದು, ಒಟ್ಟು 10 ಗಂಟೆ 45 ನಿಮಿಷಗಳ ಕಾರ್ಯಕಲಾಪಗಳಿಗೆ ತೃಪ್ತಿಪಟ್ಟುಕೊಂಡಿತ್ತು.

ಪ್ರತಿಪಕ್ಷಗಳ ಅಸ್ತ್ರಗಳು

  • ಅತಿವೃಷ್ಟಿ, ನೆರೆ ಹಾವಳಿ ಪರಿಹಾರ ಕಾರ್ಯ ಹಾಗೂ ಪುನರ್ ವ್ಯವಸ್ಥೆ ಸಮರ್ಪಕ ನಿರ್ವಹಣೆಯಲ್ಲಿ ವಿಫಲ. ಕೇಂದ್ರ ಸರ್ಕಾರದಿಂದ ಬಾರದ ನಿರೀಕ್ಷಿತ ನೆರವು
  • ಕೃಷ್ಣಾ ಎರಡನೇ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ವಿಳಂಬದಿಂದ ಯುಕೆಪಿ ಮೂರನೇ ಹಂತದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಗಾಲು
  • ವಿವಿಧ ಇಲಾಖೆಗಳಲ್ಲಿ 40 ಪರ್ಸಂಟೇಜ್ ಹಾವಳಿ. ರಾಜ್ಯ ಗುತ್ತಿಗೆದಾರರ ಸಂಘ ನೇರವಾಗಿ ಪ್ರಧಾನಮಂತ್ರಿಗೆ ಬರೆದ ಪತ್ರದಲ್ಲಿ ಗಂಭೀರ ಆರೋಪ
  • ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರಾಂತ್ಯಗಳೆಂದು ಪುನರ್ ನಾಮಕರಣ ಮಾಡಿದ ಮಾತ್ರಕ್ಕೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಕನಸು ನನಸಾಗದು
  • ಬಹುಕೋಟಿ ರೂ. ಕೈ ಬದಲಾಗಿರುವ ಬಿಟ್​ಕಾಯಿನ್ ಹಗರಣದ ತನಿಖೆಯಲ್ಲಿ ಸರ್ಕಾರದ ನಡೆ ಅನುಮಾನಾಸ್ಪದ, ಪ್ರಭಾವಿಗಳು ಶಾಮೀಲು ಆರೋಪ

ಆಡಳಿತ ಪಕ್ಷದ ಪ್ರತ್ಯಸ್ತ್ರಗಳು

  • ಅತಿವೃಷ್ಟಿ, ನೆರೆಯಿಂದ ಬೆಳೆ ನಷ್ಟ ಅನುಭವಿಸಿದ ರೈತರ ಬ್ಯಾಂಕ್ ಖಾತೆಗೆ ಎರಡು ತಿಂಗಳಲ್ಲಿ 681 ಕೋಟಿ ರೂ. ಪಾವತಿ, ಕೇಂದ್ರದ ನೆರವಿಗೆ ಕಾಯದೆ ಪರಿಹಾರ ಕಾರ್ಯ ಚುರುಕು
  • ಕೃಷ್ಣಾ ಎರಡನೇ ನ್ಯಾಯಾಧಿಕರಣದ ಅಧಿಸೂಚನೆ ಗಾಗಿ ಸುಪ್ರೀಂ ಕೋರ್ಟ್​ನಲ್ಲಿ ಕರ್ನಾಟಕದ ಕಾನೂನು ಹೋರಾಟಕ್ಕೆ ಮಹಾರಾಷ್ಟ್ರ ಸಾಥ್, ಯುಕೆಪಿ 3ನೇ ಹಂತದ ಯೋಜನೆಗಳ ಜಾರಿಗೆ ಅಗತ್ಯ ಸಿದ್ಧತೆ.
  • ಕಾಂಗ್ರೆಸ್ ಪಕ್ಷವೇ ಪರ್ಸಂಟೇಜ್ ಜನಕ ಎನ್ನುವುದಕ್ಕೆ ಕೆಪಿಸಿಸಿ ಕಚೇರಿಯಲ್ಲಿ ನಾಯಕರಿಬ್ಬರ ಪಿಸುಮಾತುಗಳು ಪುರಾವೆ, ಗುತ್ತಿಗೆದಾರರ ಸಂಘದ ಪತ್ರಕ್ಕೆ ಸ್ಪಂದಿಸಿ ತನಿಖೆಗೆ ಆದೇಶ
  • ಉತ್ತರ ಕರ್ನಾಟಕದ ಎರಡೂ ಪ್ರಾಂತಗಳ ಅಪೇಕ್ಷೆಗೆ ಅನುಗುಣವಾಗಿ ಹೆಸರುಗಳ ಪುನರ್ ನಾಮಕರಣ, ಸಮಗ್ರ ಬದ್ಧವಾಗಿ ಅನುದಾನ ನಿಗದಿ, ಕಚೇರಿಗಳ ಸ್ಥಳಾಂತರಕ್ಕೆ ಕ್ರಮ
  • ಬಿಟ್​ಕಾಯಿನ್ ಹಗರಣ ಹೊರಗೆ ತಂದಿದ್ದೇ ಬಿಜೆಪಿ ಸರ್ಕಾರ, ಸಿಬಿಐ ಇಂಟರ್​ಪೋಲ್, ಇಡಿಗೆ ಶಿಫಾರಸು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಮುಖ ಆರೋಪಿ ಶ್ರೀಕಿ ವಿರುದ್ಧ ಯಾವುದೇ ಕ್ರಮವಹಿಸಲಿಲ್ಲ

ಸಮರ್ಪಕ ಅನುಷ್ಠಾನದ ಆಶಾಭಾವನೆ

ಮಹಾರಾಷ್ಟ್ರ ಪರ ಸಂಘಟನೆಗಳ ಕ್ಯಾತೆ, ಪ್ರಾದೇಶಿಕ ಅಸಮತೋಲನದ ಅಪಸ್ವರ ಹೋಗಲಾಡಿಸುವ ಮೂರ್ತ ರೂಪವೇ ‘ಬೆಳಗಾವಿ ಸುವರ್ಣ ವಿಧಾನಸೌಧ’. ಕಾರ್ಯ-ಕಲಾಪಗಳ ಚರ್ಚೆಯ ಸಿಂಹಪಾಲು ಉತ್ತರ ಕರ್ನಾಟಕದ ಉತ್ತರೋತ್ತರ ಅಭಿವೃದ್ಧಿಗೆ ಮೀಸಲಿಟ್ಟು, ಅನುಷ್ಠಾನದ ಬದ್ಧತೆ ಸಾರಲೆಂದು ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲಾಗುತ್ತಿದೆ. ಕಳೆದೊಂದು ದಶಕದಲ್ಲಿ ಆಡಳಿತ ಕಚೇರಿಗಳ ಸ್ಥಳಾಂತರ, ಪ್ರಮುಖ ಅಭಿವೃದ್ಧಿ ಯೋಜನೆಗಳ ಜಾರಿ ಸೇರಿ ಮಹತ್ವದ ನಿರ್ಣಯಗಳನ್ನು ಕೈಗೊಂಡರೂ ಅಸಮತೋಲನ ಹಾಗೆಯೇ ಉಳಿದಿದೆ. ವಸ್ತುಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸುಸ್ಥಿರ ಅಭಿವೃದ್ಧಿ ಹಾಗೂ ಜೀವನಮಟ್ಟ ಸುಧಾರಣೆಗೆ ಅಗತ್ಯ ಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಈ ಬಾರಿ ಅಧಿವೇಶನ ಒತ್ತಾಸೆ ನೀಡಲಿದೆ ಎಂಬುದು ಉತ್ತರ ಕರ್ನಾಟಕದ ಜನರ ಆಶಾಭಾವನೆಯಾಗಿದೆ.

ಚಳಿ ಬಿಡಿಸಲು ಕಾಂಗ್ರೆಸ್, ಜೆಡಿಎಸ್ ಸಜ್ಜು

ಗಡಗಡ ನಡುಗುವ ಚಳಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಪರಸ್ಪರ ‘ಚಳಿ’ ಬಿಡಿಸಲು ಅಸ್ತ್ರ-ಪ್ರತ್ಯಸ್ತ್ರಗಳನ್ನು ತಯಾರು ಮಾಡಿಕೊಂಡಿವೆ. ಆರ್ಥಿಕತೆ ಕುಸಿತ, ಅಭಿವೃದ್ಧಿ ಕುಂಠಿತ, ಕೇಂದ್ರ ಸರ್ಕಾರದ ಅಸಡ್ಡೆ ಇತ್ಯಾದಿಗಳನ್ನು ಬಳಸಿ ಸರ್ಕಾರಕ್ಕೆ ತಿವಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮಾತಿನ ಸಮರ ನಡೆಸಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ, ಸಂಕಷ್ಟದ ನಡುವೆಯೂ ಆರ್ಥಿಕತೆ ವೃದ್ಧಿಗೆ ವೇಗದ ಸ್ಪರ್ಶ, ತುರ್ತು ಅಗತ್ಯ ಅಭಿವೃದ್ಧಿ ಕಾರ್ಯಗಳು ನಿಲ್ಲದಂತೆ ನೋಡಿಕೊಳ್ಳಲಾಗಿದೆ ಎಂದು ಆಡಳಿತ ಪಕ್ಷ ವಿವರಿಸಿ, ತಿರುಗೇಟು ನೀಡಲು ಹವಣಿಸಿದೆ.

ಚಾಟಿ ಬೀಸಿದ ಬೊಮ್ಮಾಯಿ: ಆಲಮಟ್ಟಿಗೆ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿ ಸ್ಥಳಾಂತರವಾಗಿಲ್ಲ ಎಂದು ತಿಳಿದ ಸಿಎಂ ಬಸವರಾಜ ಬೊಮ್ಮಾಯಿ, ಅಕ್ಟೋಬರ್​ನಲ್ಲಿ ಆದೇಶ ಹೊರಡಿಸಿದ್ದರು. ಆದರೂ ಕಚೇರಿ ಸ್ಥಳಾಂತರ ಆಗಿಲ್ಲವೆಂದು ಅರಿತ ಬೊಮ್ಮಾಯಿ ಗರಂ ಆಗಿದ್ದು, ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿದೆ. ಕರೊನಾ ಸೋಂಕು ಹತೋಟಿ ಉದ್ದೇಶಿತ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನಿಯಮಗಳು ಅಧಿವೇಶನಕ್ಕೂ ಅನ್ವಯವಾಗುತ್ತವೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಕಾಗದದಲ್ಲೇ ಉಳಿದ ಕಚೇರಿಗಳ ಸ್ಥಳಾಂತರ

ಅಭಿವೃದ್ಧಿ ಜತೆಗೆ ಆಡಳಿತದಲ್ಲೂ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಕುಮಾರಸ್ವಾಮಿ, ಯಡಿಯೂರಪ್ಪ ಆಡಳಿತಾವಧಿಯಲ್ಲಿ ಒಟ್ಟು 10 ಕಚೇರಿಗಳ ಸ್ಥಳಾಂತರಕ್ಕೆ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಪೈಕಿ ಬೆಳಗಾವಿಯ ಸುರ್ವಣಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಪೀಠವು ಕಾರ್ಯಾರಂಭಿಸಿದ್ದು, ಜೂ.22ರಿಂದ ಕಾರ್ಯ-ಕಲಾಪ ಆರಂಭಿಸಿದೆ. ಬೆಳಗಾವಿಗೆ ಜವಳಿ ಅಭಿವೃದ್ಧಿ ನಿಗಮದ ಕಚೇರಿ ಸ್ಥಳಾಂತರವಾಗಿ 2019, ಅ.1ರಿಂದ ಕಾರ್ಯನಿರತವಾಗಿದೆ. ಮೈಸೂರಿನಲ್ಲಿದ್ದ ಪುರಾತತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆ ಕಚೇರಿ ಹಂಪಿಗೆ ಸ್ಥಳಾಂತರವಾಗಿದ್ದು, 2019 ಏಪ್ರಿಲ್​ನಿಂದ ಹಂಪಿಯಲ್ಲಿ ಉಪ ನಿರ್ದೇಶಕರ ಕಚೇರಿ ಕಾರ್ಯಾರಂಭಿಸಿದೆ. ಧಾರವಾಡಕ್ಕೆ ರಾಜ್ಯ ಮಾನವಹಕ್ಕು ಆಯೋಗದ ಒಬ್ಬ ಸದಸ್ಯ, ಒಂದು ಉಪ ಲೋಕಾಯುಕ್ತ ಕಚೇರಿ ಸ್ಥಳಾಂತರ ಆಡಳಿತಾತ್ಮಕ ತೊಡಕಿನಿಂದ ಕೈಬಿಡಲಾಗಿದೆ. ಅಧಿಕಾರಿಗಳ ಹಿಂದೇಟು, ಕಾನೂನು-ತಾಂತ್ರಿಕ ಅಡಚಣೆಯಿಂದ ಉಳಿದ ಕಚೇರಿಗಳ ಸ್ಥಳಾಂತರ ಕಾಗದದ ಮೇಲೆ ಉಳಿದುಕೊಂಡಿವೆ.

ಸ್ಥಳಾಂತರವಾಗದ ಕಚೇರಿಗಳು

  • ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮ
  • ಬೆಳಗಾವಿಗೆ ಕಬ್ಬು ಅಭಿವೃದ್ಧಿ ಆಯುಕ್ತಾಲಯ ಮತ್ತು ಸಕ್ಕರೆ ನಿರ್ದೇಶನಾಲಯ
  • ಹುಬ್ಬಳ್ಳಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಒಂದು ಭಾಗ
  • ಮಾಹಿತಿ ಆಯೋಗದ ಮತ್ತೊಂದು ಕಚೇರಿ ಸ್ಥಾಪನೆಗೆ ಕಲಬುರಗಿ ಯಲ್ಲಿ ಸ್ಥಳ ಶೋಧ
  • ಆಲಮಟ್ಟಿಗೆ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net