

ಕಾರವಾರ: ಕರುಣಾ ಸ್ವಯಂ ಸೇವಾ ಸಂಸ್ಥೆಯಿಂದ ಕಾರವಾರದಲ್ಲಿ ಕೌಶಲ ತರಬೇತಿ ಕೇಂದ್ರ (Skill Training)ವನ್ನು ಶೀಘ್ರ ಪ್ರಾರಂಭಿಸಲಿದ್ದೇವೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಹೇಳಿದರು. ನಗರದ ಸಂಸ್ಥೆಯ ಸದಸ್ಯರ ಸಭೆಯ ನಂತರ ಅವರು ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದರು. 1984 ರಲ್ಲಿ ರಾಜೀವ ಗಾಂಧಿ ಅವರು ಕರುಣಾ ಸಂಸ್ಥೆ ಉದ್ಘಾಟಿಸಿದರು. 30 ವರ್ಷ ಮಹಿಳಾ ಸಬಲೀಕರಣ ವಿಷಯದಲ್ಲಿ ಸಂಸ್ಥೆಯು 11 ರಾಜ್ಯಗಳಲ್ಲಿ ತರಬೇತಿ ನೀಡುತ್ತಿತ್ತು. ಸಂಸ್ಥೆ ಅಷ್ಟು ಚುರುಕಾಗಿರಲಿಲ್ಲ. ಕೆಲ ಕಾಲದ ನಂತರ ನಾವು ಮತ್ತೆ ಸಂಸ್ಥೆ ಪುನರುಜ್ಜೀವನಕ್ಕೆ ಮುಂದಾಗಿದ್ದೇವೆ. ಕೋಡಿಬಾಗದಲ್ಲಿ ಸರ್ಕಾರ ಕೊಟ್ಟ ಜಾಗದಲ್ಲಿ ನಾವು ತರಬೇತಿ ನೀಡಲು ಮುಂದಾಗಿದ್ದೇವೆ. 2025 ರ ಮಾರ್ಚ್ 8 ರ ಒಳಗೆ ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕಾರ್ಯಕ್ರಮದ ಯೋಜನೆ ಹೊಂದಿದ್ದೇವೆ ಎಂದರು.
ಮಹಿಳಾ ಸ್ವಾವಲಂಬನೆಗೆ ನಾಲ್ಕು ಕ್ಷೇತ್ರಗಳನ್ನು ಆಯ್ದುಕೊಂಡಿದ್ದೇವೆ. ಹಿರಿಯ ನಾಗರಿಕರ ಕಾಳಜಿ ವಹಿಸುವವರು, ಮಕ್ಕಳ ಕಾಳಜಿ ವಹಿಸುವವರು, ಹಾಸ್ಪಿಟಾಲಿಟಿ ಮತ್ತು ಹೌಸ್ ಕೀಪಿಂಗ್ ಹಾಗೂ, ಶಿಕ್ಷಕರ ತರಬೇತಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಕೆಲವು ಖಾಸಗಿ ಸಂಸ್ಥೆಗಳ ಸಹಯೋಗ ಪಡೆಯಲಾಗುವುದು ಎಂದರು.
ಅಲ್ಲದೇ, ಖಾದಿ ಗ್ರಾಮೋದ್ಯೋಗ ಇಲಾಖೆ ನೆರವಿನಲ್ಲಿ ಜೇನು ಕೃಷಿ, ಕಾಗದದ ಉತ್ಪನ್ನಗಳು, ಕೌದಿ ತಯಾರಿಕೆ, ಸಣ್ಣ ಮಕ್ಕಳ ಬಟ್ಟೆ ಮುಂತಾದ ಉತ್ಪನ್ನಗಳನ್ನು ತಯಾರಿಸುವ Skill Training ಯೋಜನೆ ಹೊಂದಿದ್ದೇವೆ ಎಂದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಸತೀಶ ನಾಯ್ಕ ಕಾರವಾರದಲ್ಲಿ ಕರುಣಾ ಸಂಸ್ಥೆಯ ಜವಾಬ್ದಾರಿ ನೋಡಿಕೊಳ್ಳುವರು ಎಂದು ತಿಳಿಸಿದರು. ಅಮೃತಾ ಗಡಕರ್, ಪ್ರಿಯಾಂಕಾ ಬಾಂದೇಕರ್, ಪೂರ್ಣಿಮಾ ನಾಯ್ಕ, ನಮೃತಾ ಪಟೀಲ್, ಸುಮಂಗಲಾ ಹನೇ ಹಳ್ಳಿ, ಸಂಧ್ಯಾ ಕಾಮತ್, ಶ್ಯಾಮಲಾ ವೈದ್ಯ, ರವೀನಾ ನಾಯ್ಕ ಸಭೆಯಲ್ಲಿದ್ದರು.