

ಕಾರವಾರ: ಅಮದಳ್ಳಿಯಲ್ಲಿ ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಕಾಡು ಪ್ರಾಣಿಗಳು (Wild Animals) ಊರಿಗೆ ನುಗ್ಗಿಬಿಟ್ಟಿದ್ದವು. ಜಾತ್ರೆಯ ನಡುವೆ ಜನರನ್ನು ಭಯಭೀತಗೊಳಿಸಿದವು.!! ನಿಜ ವನ್ಯ ಮೃಗಗಳಲ್ಲ. ವನ್ಯ ಮೃಹಗಳನ್ನು ಹೋಲುವ ಸ್ತಬ್ದ ಚಿತ್ರಗಳ ಮೆರವಣಿಗೆ ಸೇರಿದ್ದ ಸಾವಿರಾರು ಜನರ ಅಚ್ಚರಿಗೆ ಕಾರಣವಾಯಿತು. ಅಮದಳ್ಳಿಯ ನಾರಾಯಣ ದೇವರ ದಿಂಡಿ ಹಬ್ಬದ ಅಂಗವಾಗಿ ಸ್ಥಳೀಯ ವಿವಿಧ ಗ್ರಾಮಗಳ ಯುವಕರು ಸ್ವತಃ ತಯಾರಿಸಿದಂತೆ ಟ್ಯಾಬ್ಲೋಗಳ ಪ್ರದರ್ಶನ ಸ್ಥಳೀಯ ಭಾಷೆಯಲ್ಲಿ ಹಗರಣ ಶನಿವಾರ ತಡ ರಾತ್ರಿಯವರೆಗೂ ನಡೆಯಿತು. ಎರಡು ಅಂತಸ್ಸಿನ ಮನೆಯಷ್ಟು ಎತ್ತರದ ಡೈನೋಸಾರ್, ರಾಕ್ಷಸನನ್ನು ಹೋಲುವ ಕೋರೆ ಹಲ್ಲುಗಳಿರುವ ವರಾಹ, ಲಾರಿಗಿಂತ ಉದ್ದವಾದ ಚೇಳು, ಕತ್ತೆ ಕಿರುಬ ಹೀಗೆ ಚಿತ್ರ ವಿಚಿತ್ರ 10 ಕ್ಕೂ ಹೆಚ್ಚು ಪ್ರಾಣಿಗಳ ಪ್ರದರ್ಶನ ಮೈ ನವಿರೇಳಿಸಿತು. ನಡುವೆ ಸಾತ್ವಿಕ ಸ್ವಭಾವದ ಗೋವು ಶಾಂತವಾಗಿ ಓಡಾಡುತ್ತಿತ್ತು. ಇಷ್ಟೇ ಅಲ್ಲದೇ, ಕಾಂತಾರ ಚಿತ್ರದ ದೈವ ನರ್ತಕ, ಬಲಿ ಚಕ್ರವರ್ತಿಯ ಕತೆ ಹೀಗೆ ವಿವಿಧ ಐತಿಹಾಸಿ, ಪೌರಾಣಿಕ ಪಾತ್ರವನ್ನು ಬಿಂಬಿಸುವ ಪಾತ್ರಗಳು ಮನೋಜ್ಞವಾಗಿ ಬಿಂಬಿತವಾಗಿದ್ದರೆ. ನಡು, ನಡುವೆ ಓಡಾಡುವ ಹಗಲು ವೇಷದ ಜೋಕರ್ಗಳು ನಗೆ ಹುಟ್ಟಿಸಿದರು.
ಹೆಚ್ಚಿನ ಪ್ರಾಣಿಗಳನ್ನು ವಾಹನಗಳ ಮೇಲಲ್ಲ. ಸ್ಥಳೀಯ 40 ಕ್ಕಿಂತ ಹೆಚ್ಚು ಯುವಕರು ತಲೆಯ ಮೇಲೆ ಹೊತ್ತು ತಂದು ಬಯಲಿನಲ್ಲಿ ಓಡಾಡಿಸಿದ್ದು, ಇನ್ನೂ ವಿಶೇಷವಾಗಿತ್ತು. ಅರ್ಯಾರೂ ಹಣಕ್ಕಾಗಿ ಅಲ್ಲ, ಲಕ್ಷಾಂತರ ಖರ್ಚು ಮಾಡಿ, ಸ್ತಬ್ದ ಚಿತ್ರಗಳನ್ನು ಪ್ರದರ್ಶನ ಮಾಡಿರುವುದು ವಿಶೇಷವಾಗಿತ್ತು.
ದೇವರ ಪಲ್ಲಕ್ಕಿ ಮೆರವಣಿಯ ನಂತರ ಪಟಾಕಿ ಸದ್ದಿನೊಂದಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಪ್ರದರ್ಶನಗೊಂಡ ಈ ಪ್ರದರ್ಶನ ನೋಡಲು ಕಾರವಾರ ಹಾಗೂ ಅಂಕೋಲಾ ತಾಲೂಕುಗಳ ಸಾವಿರಾರು ಜನ ಆಗಮಿಸಿದ್ದರು.