ಮರಗಳ ರಕ್ಷಣೆಗೆ ಮಹಿಳೆಯರು ಕಾರ್ಯಕ್ರಮ

ಮರಗಳ ರಕ್ಷಣೆಗೆ ಮಹಿಳೆಯರು ಕಾರ್ಯಕ್ರಮ
Published on

ಪಿರಿಯಾಪಟ್ಟಣ: ಪ್ರತಿಯೊಬ್ಬ ಮಹಿಳೆಯರಿಗೂ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಮರಗಳ ರಕ್ಷಣೆಗೆ ಮಹಿಳೆಯರು’ ಎಂಬ ವಿನೂತನ ಕಾರ್ಯಕ್ರಮವನ್ನು ಅಮೃತ್ 2.0 ಯೋಜನೆಯಡಿ ರೂಪಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಯು.ಮುತ್ತಪ್ಪ ಹೇಳಿದರು.

ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್ ಪಕ್ಕದ ಕೆರೆಯ ಆವರಣದಲ್ಲಿ ಮಹಿಳಾ ಸಂಘಗಳಿಗೆ ಗಿಡ ನೆಡಲು ಸ್ಥಳ ವೀಕ್ಷಣೆ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಮಹಿಳಾ ಸಂಘಟನೆಗಳು ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ ಇದಾಗಿದ್ದು, ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂಬ ವಿಶೇಷ ಘೋಷವಾಕ್ಯದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬ ತಾಯಿಯು ಒಂದು ಗಿಡವನ್ನು ಆಯ್ದ ಪ್ರದೇಶಗಳಲ್ಲಿ ನೆಟ್ಟು ಅದನ್ನು ಪೋಷಿಸಬೇಕು. ಎರಡು ವರ್ಷಗಳ ಕಾಲ ಪೋಷಣೆ ಮಾಡಬೇಕು ಗಿಡ ನೆಡುವ ಯೋಜನೆ ಜೂ.5ರಿಂದ ಆರಂಭವಾಗುತ್ತದೆ ಇದು ಆಗಸ್ಟ್ 31ರಲ್ಲಿ ಕೊನೆಗೊಳ್ಳುತ್ತದೆ ಎಂದರು.

ಈ ಅವಧಿಯಲ್ಲಿ ಮಹಿಳಾ ಸಂಘದ ಸದಸ್ಯರುಗಳು ತಮ್ಮ ವ್ಯಾಪ್ತಿಯ ಶಾಲೆ, ಕಾಲೇಜು, ದೇವಾಲಯ, ಪಾರ್ಕ್ ಮುಂತಾದ ಕಡೆಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವ ಕೆಲಸ ಮಾಡುತ್ತಾರೆ. ಇದಕ್ಕೆ ಅಗತ್ಯವಾದ ಗಿಡಗಳು ಗೊಬ್ಬರ ಮತ್ತಿತರ ಸಲಕರಣೆಗಳನ್ನು ಪುರಸಭೆ ವತಿಯಿಂದ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಪುರಸಭೆ ಸಮುದಾಯ ಸಂಘಟನಾ ಅಧಿಕಾರಿ ಶರ್ಮಿಳಾ ಮಾತನಾಡಿ, ಈ ಯೋಜನೆಗೆ ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು ಮೂರು ಮಹಿಳಾ ಸಂಘಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, 38 ಮಹಿಳೆಯರನ್ನು ಒಳಗೊಂಡ ಸಂಘಗಳು ಈ ತಾಯಿಗಾಗಿ ಒಂದು ಗಿಡ ಎಂಬ ಕಾರ್ಯಕ್ರಮ ರೂಪಿಸಲಿವೆ. ಈಗಾಗಲೆ ಕೆರೆ, ದೇವಾಲಯ, ಮುಂತಾದ ಆವರಣಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ಜೂ.5ರಿಂದ ಗಿಡ ನೆಡುವ ಕೆಲಸ ಮಾಡಲಾಗುತ್ತದೆ. ಯಾರು ಗಿಡಗಳನ್ನು ಎರಡು ವರ್ಷಗಳವರೆಗೆ ಪೋಷಿಸುತ್ತಾರೋ ಅಂತವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ತಿಳಿಸಿದರು.

ಪುರಸಭೆ ಇಂಜಿನಿಯರ್ ವನಿತಾ, ಸಿ.ಆರ್.ಪಿ.ಶೋಭಾ, ಸೇರಿದಂತೆ ಮಹಿಳಾ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net