ಕಟ್ಟುಪಾಡುಗಳಿಂದ ಸ್ತ್ರೀ ಸಮಾನತೆ ಹಿನ್ನಡೆ

ಕಟ್ಟುಪಾಡುಗಳಿಂದ ಸ್ತ್ರೀ ಸಮಾನತೆ ಹಿನ್ನಡೆ
Published on

ಸೋಮವಾರಪೇಟೆ: ಸಮಾಜದಲ್ಲಿರುವ ಕಟ್ಟುಪಾಡುಗಳಿಂದ ಮಹಿಳೆಯರು ಸಮಾನತೆ ಪಡೆಯಲು ಹಿನ್ನೆಡೆಯಾಗಿದೆ ಎಂದು ನಾವು ಪ್ರತಿಷ್ಠಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯು ಹೇಳಿದರು.

ಮಹಿಳಾ ಸಹಕಾರ ಸಂಘದಿಂದ ಮಹಿಳಾ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲಾ ಮಹಿಳೆ ಮತ್ತು ಹೆಣ್ಣುಮಕ್ಕಳಿಗೆ ಹಕ್ಕು, ಸಮಾನತೆ ಮತ್ತು ಸಬಲೀಕರಣ ಇದು ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವಾಗಿದೆ. ಪ್ರಸಕ್ತವಾಗಿ ಕ್ರೀಡೆ, ರಾಜಕೀಯ, ಉದ್ಯೋಗ, ಸಾಹಸ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿದ್ದರೂ. ಎಲ್ಲೋ ಒಂದು ಕಡೆ ಸಮಾನತೆ, ಸಬಲೀಕರಣ ಆಗಿಲ್ಲ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇದನ್ನು ಮಹಿಳೆಯರು ಮನನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕೊಡಗಿನಲ್ಲಿ 9 ತಿಂಗಳಿನಿಂದ 30 ಅಪ್ರಾಪ್ತ ಗರ್ಭಿಣಿಯರನ್ನು ಇಲಾಖೆ ಗುರುತುಮಾಡಿದೆ. 5 ಬಾಲ್ಯ ವಿವಾಹಗಳಾಗಿವೆ. ಹಾಗಾದರೆ ಅವರೆಲ್ಲ ತಮ್ಮ ಬಾಲ್ಯದಿಂದ ಉತ್ತಮ ಶಿಕ್ಷಣದಿಂದ, ಉತ್ತಮ ವಾತಾವರಣದಿಂದ, ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂಬುದೇ ಕಟುಸತ್ಯವಾಗಿದೆ. ಸರ್ಕಾರದ ಮಟ್ಟದಲ್ಲಿ ಎಲ್ಲಾ ವರ್ಗದ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು. ಜ್ಞಾನ, ಆರೋಗ್ಯ ಕಾಳಜಿ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಬುಡಕಟ್ಟು ಜನಾಂಗದವರಲ್ಲಿ ಮಹಿಳೆಯರಿಗೆ ಶೋಷಣೆ ಆಗುತ್ತಿದೆ. ಅವರಿಗೆ ಕಾನೂನಿನ ಅರಿವು ಮೂಡಿಸಬೇಕಿದೆ ಎಂದು ಹೇಳಿದರು. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

ಸಂಘದ ಹಿರಿಯ ಸದಸ್ಯರಾದ ಲೀಲಾ ನಿರ್ವಾಣಿ ಹಾಗು ಹೋಮ್‌ಗಾರ್ಡ್ ಸೇವೆಯಲ್ಲಿ ಪ್ರಶಸ್ತಿ ಪಡೆದ ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ನಡೆಸಿದ ವಿವಿಧ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಉಪಾಧ್ಯಕ್ಷೆ ಶೋಭಾ ಯಶವಂತ್, ನಿರ್ದೇಶಕರುಗಳಾದ ಸುಮಾ ಸುದೀಪ್, ಜಲಜಾ ಶೇಖರ್, ಗಾಯತ್ರಿ ನಾಗರಾಜ್, ಗೀತಾ ರಾಜು, ಮಾಯಾ ಗಿರೀಶ್, ಪಂಕಜ ಪ್ರಭಾಕರ್, ಉಮಾ ರುದ್ರಪ್ರಸಾದ್, ಮಂಜುಳಾ ಸುಬ್ರಮಣಿ ಹಾಗೂ ಶೈಲಾ ವಸಂತ್ ಇದ್ದರು.

16ಎಸ್‌ಪಿಟಿ3: ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಲೀಲಾ ನಿರ್ವಾಣಿ ಹಾಗು ಹೋಮ್‌ಗಾರ್ಡ್ ಸೇವೆಯಲ್ಲಿ ಪ್ರಶಸ್ತಿ ಪಡೆದ ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ಸುಮನಾ, ವಿಜಯಲಕ್ಷ್ಮೀ ಸುರೇಶ್, ಶೋಭಾ, ಸುಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net