

ಮೂಲ್ಕಿ: ಹದಿಹರೆಯದ ಮಕ್ಕಳೊಂದಿಗೆ ಗೆಳೆಯರಂತಿದ್ದು ಸಮಾಜ ಹಾಗೂ ಜೀವನ ಮೌಲ್ಯಗಳ ಬಗ್ಗೆ ತಿಳಿ ಹೇಳುವ ಕಾರ್ಯ ಹಿರಿಯರಿಂದ ಆಗಬೇಕು ಎಂದು ಮಂಗಳೂರು ಉರ್ವ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಸೌಮ್ಯಾ ಸತೀಶ್ ಹೇಳಿದರು.
ಚಿತ್ರಾಪು ಯುವಕ- ಯುವತಿ ಮಂಡಲ ಆಶ್ರಯದಲ್ಲಿ ಮಹಿಳಾ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಕಾನೂನು ವಿಷಯದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಇಲಾಖೆಯಲ್ಲಿನ ಅವರ ಸಾಧನೆ ಮತ್ತು ಸೇವೆ ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಹಲವಾರು ವರ್ಷಗಳಿಂದ ಮಹಿಳಾ ಮಂಡಳಿಯಲ್ಲಿ ಸೇವೆಗೈದ ಪದಾಧಿಕಾರಿಗಳು ಮತ್ತು ಯುವತಿ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು.
ಯುವಕ ಮಂಡಲ ಮಾಜಿ ಅಧ್ಯಕ್ಷ ಗಂಗಾಧರ್ ಅಮಿನ್, ಮಹಿಳಾ ಮಂಡಲ ಅಧ್ಯಕ್ಷೆ ಸಾವಿತ್ರಿ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಸಂದೀಪ್, ಯುವಕ ಮಂಡಲ ಅಧ್ಯಕ್ಷ ತುಷಾರ್ ಉಪಸ್ಥಿತರಿದ್ದರು. ವಿನುತಾ ಸ್ವಾಗತಿಸಿದರು. ಲತಾ ವಂದಿಸಿದರು. ಕಾರ್ಯದರ್ಶಿ ಮಾರ್ಗರೆಟ್ ಸುದರ್ಶನಿ ನಿರೂಪಿಸಿದರು.