

ಮೈಸೂರು: ನಗರದ ಅರಮನೆ ಆವರಣದಲ್ಲಿ ಮಹಿಳಾ ದಸರಾ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ಮಹಿಳೆಯರು ಆಗಮಿಸಿ ರಂಗೋಲಿ ಬಿಡಿಸಿ ಗಮನಸೆಳೆದರು.
ಬೆಳಗ್ಗೆ 7 ಗಂಟೆಗೂ ಮೊದಲೇ ಅರಮನೆ ಆವರಣಕ್ಕೆ ಬಂದ ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಸಜ್ಜಾದರು. ಮೈಸೂರು ದಸರಾ ಕುರಿತು, ಲಿಂಗಸಮಾನತೆಗೆ ಉತ್ತೇಜನ, ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಶ್ರೀರಾಮ, ಮಹಿಷ ಸೇರಿದಂತೆ ಇತರ ರಂಗೋಲಿಗಳು ಗಮನಸೆಳೆದವು.
ರಂಗೋಲಿ ಸ್ಪರ್ಧೆಯಲ್ಲಿ ಆರ್.ಕೆ.ನಗರದ ಹೇಮಲತಾ (ಪ್ರ), ಕುರುಬರಹಳ್ಳಿಯ ಜಯಶ್ರೀ (ದ್ವಿ), ರೂಪನಗರದ ರೂಪಶ್ರೀ(ತೃ) ಬಹುಮಾನ ಪಡೆದುಕೊಂಡರು.
ಉದ್ಘಾಟನೆ: ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ರಂಗೋಳಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ರಂಗೋಲಿ ಸ್ಪರ್ಧೆಯ ಮೂಲಕ ಮಹಿಳಾ ದಸರಾ ಪ್ರಾರಂಭವಾಗುತ್ತಿದೆ. ರಾಜ್ಯ, ದೇಶದ ಗಮನಸೆಳೆಯುವಂತೆ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು. ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಉಪವಿಶೇಷಾಧಿಕಾರಿ ವಿ.ಪ್ರಿಯದರ್ಶಿನಿ, ಕಾರ್ಯಾಧ್ಯಕ್ಷ ಬಿ. ಬಸವರಾಜು ಇತರರು ಇದ್ದರು. ತೀರ್ಪುಗಾರರಾಗಿ ಪ್ರತಿಭಾ ಹರೀಶ್, ಮೀನಾಕ್ಷಿ ಕಾರ್ಯನಿರ್ವಹಿಸಿದರು.