ಋತುಚಕ್ರದ ವೇಳೆ ಮಹಿಳೆಯರು ಶುಚಿತ್ವ ಕಾಪಾಡಿಕೊಳ್ಳಲಿ

SRP_28-01jpj
Published on

ಶ್ರೀರಂಗಪಟ್ಟಣ: ಹೆಣ್ಣಿನ ಜೀವನದಲ್ಲಿ ಋತುಚಕ್ರ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಸ್ತ್ರೀ ಗರ್ಭ ಧರಿಸಲು ಋತುಚಕ್ರ ಅಗತ್ಯವಾದ ನೈಸರ್ಗಿಕ ಕ್ರಿಯೆ. ಈ ಸಂದರ್ಭದಲ್ಲಿ ಮಹಿಳೆಯರು ಶುಚಿತ್ವ ಕಾಪಾಡಿಕೊಳ್ಳುವುದು ಅವಶ್ಯ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಯುಷ್ ವೈದ್ಯ ಡಾ.ರಮ್ಯಾ ಹೇಳಿದರು.

ಪಟ್ಟಣದ ಶ್ರೀ ರಂಗನಾಯಕಿ ಸ್ತ್ರೀ ಸಮಾಜ, ಕಾಮಧೇನು ಶ್ರೀ ಸ್ವ ಸಹಾಯ ಸಂಘ ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಶ್ರೀರಂಗನಾಯಕಿ ಸ್ತ್ರೀ ಸಮಾಜದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಹಿಳೆಯರಿಗೆ ಆರೋಗ್ಯ ಮತ್ತು ಶಿಕ್ಷಣ ಜಾಗೃತಿ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಋತುಸ್ರಾವ ಸಂದರ್ಭದಲ್ಲಿ ಪ್ರತಿನಿತ್ಯ ಸ್ನಾನ ಸೇರಿದಂತೆ ಈ ಬಗೆಗಿನ ಮೂಢ ನಂಬಿಕೆಗಳನ್ನು ತೊಲಗಿಸೋಣ. ಮಹಿಳೆಯರು ಆರೋಗ್ಯದ ಕಡೆ ಜಾಗೃತಿ ವಹಿಸಬೇಕೆಂದರು.

ಕಾಮಧೇನು ಶ್ರೀ ಸ್ವ-ಸಹಾಯ ಸಂಘದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ, ಮಹಿಳೆ ತಾಯಿಯಾಗಿ, ಪತ್ನಿಯಾಗಿ ತನ್ನ ಮನೆ ಹಾಗೂ ಕುಟುಂಬದ ನಿರ್ವಹಣೆ ಮಾಡುವ ಭರದಲ್ಲಿ ಪ್ರತಿನಿತ್ಯ ಒತ್ತಡದಲ್ಲೇ ಶ್ರಮಿಸಿ ಎಲ್ಲರ ಸೇವೆ ಮಾಡಿ ತನ್ನ ಆರೋಗ್ಯ ಮತ್ತು ಆಹಾರ ಸೇವನೆಯ ಕಾಳಜಿ ವಹಿಸುವಲ್ಲಿ ನಿರ್ಲಕ್ಷಿಸಿ ವಿವಿಧ ರೀತಿಯ ಅನಾರೋಗ್ಯಕ್ಕೆ ಒಳಗಾಗುತ್ತಾಳೆ. ನಮ್ಮ ಮಹಿಳೆಯರು ಸಹ ಎಲ್ಲರಂತೆ ಸಂತಸದ ಜೀವನ ನಡೆಸಲು ಇಂತಹ ಆರೋಗ್ಯ ಶಿಬಿರವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಿರ್ವಹಿಸಬೇಕು ಎಂದರು.

ಸಂಘದ ಹಾಲಿ ಅಧ್ಯಕ್ಷೆ ವಿಶಾಲಕ್ಷ್ಮೀ ಮಾತನಾಡಿ, ನಾನು ಸಂಘಕ್ಕೆ ನೂತನವಾಗಿ ಅಧಿಕಾರವಹಿಸಿಕೊಂಡ ಬಳಿಕ ಮೊದಲ ಕಾರ್ಯಕ್ರಮವನ್ನು ಮಹಿಳೆಯರ ಕಾಳಜಿಗಾಗಿಯೇ ಈ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಇಂತಹ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಸಂಘದ ಸದಸ್ಯರ ಸಹಕಾರದೊಂದಿಗೆ ಮುನ್ನಡೆಸಿಕೊಂಡು ಹೋಗಲಾಗುತ್ತದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಮಾತನಾಡಿ, ಋತುಚಕ್ರದ ಸಂಬಂಧ ಏನೇ ತೊಂದರೆ, ಆರೋಗ್ಯ ಸಮಸ್ಯೆ ಇದ್ದಲ್ಲಿ ಪ್ರತಿಯೊಂದು ಆರೋಗ್ಯ ಕೇಂದ್ರದಲ್ಲೂ ಪ್ರತಿ ಗುರುವಾರ ಮಧ್ಯಾಹ್ನ 3ರಿಂದ ಸಂಜೆ 5 ವರೆಗೆ ಸ್ನೇಹ ಕ್ಲಿನಿಕ್ ತೆರೆಯಲಾಗಿದ್ದು, ಅಲ್ಲಿ ಸಲಹೆ, ಪರಿಹಾರ ಕೊಂಡುಕೊಳ್ಳಬಹುದಾಗಿದೆ. ಜತೆಗೆ ಕೋವಿಡ್ ಮತ್ತೆ ಸದ್ದು ಮಾಡುತ್ತಿದ್ದು ಮುಂಜಾಗ್ರತೆಗಾಗಿ ಕೈ ತೊಳೆದುಕೊಳ್ಳುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಂಡು ಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು. ಕೋವಿಡ್ ಭಯಬೇಡ ಎಚ್ಚರಿಕೆ ವಿರಲಿ, ಮಳೆಗಾಲ ಪ್ರಾರಂಭವಾಗಿದ್ದು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಇರಲಿ ಕಾಲ ಕಾಲಕ್ಕೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವೈದ್ಯ ಡಾ.ಕೆ.ವೈ.ಶ್ರೀನಿವಾಸ್ ಹಾಗೂ ಸರ್ಕಾರಿ ಆಸ್ಪತ್ರೆಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಮಹದೇವಮ್ಮ ಮತ್ತು ಸ್ಮಿತಾ ಮಹಿಳೆಯರಲ್ಲಿನ ಮಧುಮೇಹ, ರಕ್ತದೊತ್ತಡ ಹಾಗೂ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿದ್ದು, ನೂರಕ್ಕು ಹೆಚ್ಚು ಜನರು ಈ ಸೇವೆ ಪಡೆದುಕೊಂಡರು.

ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಕಾಮಧೇನು ಶ್ರೀ ಸ್ವ-ಸಹಾಯ ಸಂಘದ ಉಪಾಧ್ಯಕ್ಷೆ ಸರಸ್ವತಿ, ಶ್ರೀ ರಂಗನಾಯಕಿ ಸ್ತ್ರೀ ಸಮಾಜ ಉಪಾಧ್ಯಕ್ಷ ಕಮಲಾ ಸೋಮಶೇಖರ್, ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ನಿರ್ದೇಶಕರಾದ ಮಾಲತಿ, ಕಮಲ, ಶೋಭಾ, ಸವಿತಾ, ಲಲಿತಾ, ಸುವರ್ಣದೇವಿ, ಸಂಧ್ಯಾ, ಅಶಾ ಕಾರ್ಯಕರ್ತೆ ಚಾಂದನಿ, ಮೀನಾ, ಹೇಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net