ಮಹಿಳೆಯರಿಗೆ ಹಕ್ಕು, ಕರ್ತವ್ಯಗಳ ಅರಿವಿರಬೇಕು

9-hvr-07
Published on

ಹಾವೇರಿ: ಮಹಿಳೆಯರು ಇಂದು ಸಮಾಜದ ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ಗರಗ ಹೇಳಿದರು.

ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಕಾಲೇಜ್ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಕಾಲೇಜ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಹೆಣ್ಣು ತಾಯಿಯಾಗಿ, ಮಗಳಾಗಿ, ಅಕ್ಕ ತಂಗಿಯಾಗಿ, ಮಡದಿಯಾಗಿ ಕಷ್ಟ ಸುಖ ಸಹಿಸಿಕೊಂಡು ಜೀವನ ಸಾಗಿಸುತ್ತ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾಳೆ. ಮಹಿಳೆಯರಿಗೆ ತಮ್ಮ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಮಾಹಿತಿಯಿರಬೇಕು. ಸಂವಿಧಾನದಲ್ಲಿರುವ ಹಕ್ಕುಗಳು ಹಾಗೂ ಕರ್ತವ್ಯಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಅಭಿವೃದ್ಧಿ ಹೊಂದಬೇಕು. ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕಾನೂನು ಅರಿವಿನ ಅವಶ್ಯಕತೆಯಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ ಮಾತನಾಡಿ, ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು. ಮಹಿಳೆಯರು ತಮಗೆ ನೀಡಿದ ಹಕ್ಕಗಳನ್ನು ಚಲಾಯಿಸುವಲ್ಲಿ ಹಿಂಜರಿಯುತ್ತಿದ್ದಾರೆ ಎಂದರು.

ಮಹಿಳಾ ಸಬಲೀಕರಣ ಮತ್ತು ಸಶಕ್ತಿಕರಣ ಕುರಿತು ಡಾ. ಪುಷ್ಪಾವತಿ ಶೆಲವಡಿಮಠ, ಮಹಿಳೆಯರಿಗಾಗಿರುವ ಕಾನೂನುಗಳ ಕುರಿತು ತಾಲೂಕು ಮಹಿಳಾ ಸಂರಕ್ಷಣಾಧಿಕಾರಿ ಉಮಾ ಕೆ.ಎಸ್., ಪೊಲೀಸ್ ದೂರು ಪ್ರಾಧಿಕಾರದ ರಚನೆ ಕುರಿತು ಶಹರ ಠಾಣೆಯ ಸಿಪಿಐ ಪ್ರಭಾವತಿ ಶೇತಸನದಿ ಉಪನ್ಯಾಸ ನೀಡಿದರು.

ಪ್ರಾಚಾರ್ಯು ಡಾ. ಸವಿತಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಶ್ರೀವಿದ್ಯಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಜಿ. ಪದ್ಮಾವತಿ, ಎನ್ನೆಸ್ಸೆಸ್ ಅಧಿಕಾರಿಗಳಾದ ಬಿ.ವಿ. ಹಿರೇಮಠ, ವಿ.ವಿ. ಚರಂತಿಮಠ, ಯುಥ್ ರೆಡ್​ಕ್ರಾಸ್ ಅಧಿಕಾರಿ ಎಸ್.ಎಚ್. ಸಂಗಾಪುರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net