ಸೈಬರ್ ಅಪರಾಧದ ಬಗ್ಗೆ ಮಹಿಳೆಯರು ಎಚ್ಚರ ವಹಿಸಲಿ

ಸೈಬರ್ ಅಪರಾಧದ ಬಗ್ಗೆ ಮಹಿಳೆಯರು ಎಚ್ಚರ ವಹಿಸಲಿ
Published on

ಸೋಮವಾರಪೇಟೆ: ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ಮಹಿಳೆಯರು ಎಚ್ಚರ ವಹಿಸಬೇಕು ಎಂದು ಸಂಪನ್ಮೂಲವ್ಯಕ್ತಿ ಹಾಗೂ ವಕೀಲರಾದ ಎಚ್.ಆರ್.ಪವಿತ್ರಾ ಹೇಳಿದರು.

ಆದಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯ, ಸೋಮವಾರಪೇಟೆ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲಾಖೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಸೈಬರ್ ಸ್ಟಾಕಿಂಗ್ ಎಲ್ಲರಿಗೂ ಅಪಾಯದ ವಿಷಯವಾಗಿದೆ. ಅದರಲ್ಲೂ ಮಹಿಳೆಯರನ್ನು ಬೆಂಬಿಡದೆ ಕಾಡುವ ಅಪಾಯಕಾರಿ ಕೃತ್ಯವಾಗಿದೆ. ಇದರಿಂದ ಹೊರಬರಲು ಆಗದೆ ದೈಹಿಕ ದುರ್ಬಳಕೆಗೆ ಕಾರಣವಾಗಬಹುದು. ಹಾಗಾಗಿ ಸೈಬರ್ ಸ್ಟಾಕಿಂಗ್ ಬಗ್ಗೆ ದೂರು ಸಲ್ಲಿಸಲು ತಡ ಮಾಡದೆ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಕಿವಿಮಾತು ಹೇಳಿದರು.

ಸೈಬರ್ ಕಾಮುಕತೆಯನ್ನು ನಿರ್ಲಕ್ಷಿಸುವುದು, ಕಾಯುವುದು ಬೇಡಾ. ಇದು ಬಹಳಕಾಲ ಮುಂದುವರಿದರೆ, ಭಾವನಾತ್ಮಕವಾಗಿ, ಮಾನಸಿಕವಾಗಿ ಅಥವಾ ದೈಹಿಕವಾಗಿ ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ.

ಸೈಬರ್ ಸ್ಟಾಕಿಂಗ್‌ನ್ನು ತಡೆಗಟ್ಟುವುದು ಕಷ್ಟ, ಯಾಕೆಂದರೆ ಸ್ಟಾಕರ್ ಮತ್ತೊಂದು ಊರು, ರಾಜ್ಯ ದೇಶದಲ್ಲಿರಬಹುದು ಅಥವಾ ಬಲಿಪಶುವಿನಿಂದ ಮೂರು ಮೀಟರ್ ಅಂತರದಲ್ಲಿ ಕುಳಿತಿರಬಹುದು. ಇಂಟರ್ನೆಟ್ ಅನಾಮಧೇಯ ಜಗತ್ತಿನಲ್ಲಿ ಸ್ಟಾಕರ್‌ನ ಗುರುತನ್ನು ಪರಿಶೀಲಿಸುವುದು, ಬಂಧನಕ್ಕೆ ಅಗತ್ಯ ಸಾಕ್ಷೃ ಸಂಗ್ರಹಿಸಿ ನಂತರ ಸೈಬರ್ ಸ್ಟಾಕರ್ನ ಭೌತಿಕ ಸ್ಥಳವನ್ನು ಪತ್ತೆಹಚ್ಚುವುದು ಕಷ್ಟ, ಆದ್ದರಿಂದ ಸುರಕ್ಷಿತವಾಗಿರಲು ಮತ್ತು ಆನ್‌ಲೈನ್ ಸಂಪನ್ಮೂಲಗಳನ್ನು ಭದ್ರತಾ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಜಾಣ್ಮೆ ಮಹಿಳೆಯರಲ್ಲಿ ಇರಬೇಕು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಒಳ್ಳೆಯದಲ್ಲ, ಹಂಚಿಕೊಳ್ಳುವ ಸಂದರ್ಭ ಬಂದರೆ ಸಭ್ಯತೆಯ ಎಲ್ಲೆ ಮೀರದಂತಹ ಪೋಟೋ, ವೀಡಿಯೋ ಹಾಕಿದರೆ ಸಮಸ್ಯೆಯಿಲ್ಲ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯೆ ಶೀಲಾ ಡಿಸೋಜ, ಆದಿವಕ್ತಾ ಪರಿಷತ್‌ನ ಪದಾಧಿಕಾರಿಗಳಾದ ಯು.ಶಶಿಕುಮಾರ್, ಕೆ.ಡಿ.ಜೀವನ್ ಕುಮಾರ್, ಜಗದೀಶ್ ಬೋಪಣ್ಣ, ಎಸ್.ಜೆ.ಹೇಮಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net