

ಬೆಂಗಳೂರು: ರಾಜ್ಯ ರಾಜಧಾನಿಗೆ ಉದ್ಯೋಗ ಅರಸಿಕೊಂಡು ಹಲವಾರು ರಾಜ್ಯ, ದೇಶ-ವಿದೇಶಗಳಿಂದ ವಲಸಿಗರು ಬರುತ್ತಾರೆ. ಮೊದಲು ತಮಗೆ ಸರಿಹೊಂದುವ ಹುದ್ದೆಯನ್ನು ಹುಡುಕಿ, ಆಯ್ಕೆ ಮಾಡಿಕೊಳ್ಳುವವರು, ಕೆಲಸ ಖಾಯಂ ಆಗ್ತಿದ್ದಂತೆ ಹುಡುಕುವುದೇ ಒಂದೊಳ್ಳೆ ಮನೆ. ತಿಂಗಳಾಂತ್ಯದಲ್ಲಿ ಜೇಬು ತುಂಬಿಸುವ ಸಂಬಳ ಬಂದರೆ ಎಷ್ಟು ಖುಷಿಯೋ, ದಣಿದು ಬಂದಾಗ ನಿದ್ರಿಸಲು ಆರಾಮದಾಯಕ ಜಾಗ ಹುಡುಕಿಳ್ಳುವುದು ಅಷ್ಟೇ ಖುಷಿ. ಈ ನಿಟ್ಟಿನಲ್ಲಿ ಅನೇಕ ಮಂದಿ, ಬೆಂಗಳೂರಿನ ಮೂಲೆ ಮೂಲೆಯಲ್ಲಿ ಮನೆ, ಫ್ಲ್ಯಾಟ್ಗಳ ಮಾಹಿತಿಯನ್ನು ಸಂಗ್ರಹಿಸಿ, ಅದರಲ್ಲಿ ತಮಗೆ ಇಷ್ಟವಾದ, ಬಜೆಟ್ಗೆ ತಕ್ಕವಾದ ಮನೆಯನ್ನು ನೋಡುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ, ಬೆಂಗಳೂರಿನಲ್ಲಿ ಫ್ಲ್ಯಾಟ್ವೊಂದನ್ನು ಮೊದಲು ಓಕೆ ಮಾಡಿದ್ದೇ ಆದರೂ ನಂತರ ಕೇಳಿದ ದುಬಾರಿ ಮೊತ್ತದ ಮುಂಗಡ ಪಾವತಿ ಹಣ ಕೇಳಿ ದಂಗಾಗಿದ್ದಾಳೆ.
ಇಂದು ಯಾವುದೇ ನಗರದಲ್ಲಿ ಒಂದು ಮನೆ ಬಾಡಿಗೆ ಪಡೆಯುವುದು ದೊಡ್ಡ ಸವಾಲು. ಮೊದಲಿಗೆ ನಮ್ಮಿಷ್ಟದ ನಿವಾಸ ಸಿಕ್ಕರೂ, ಬಜೆಟ್ಗೆ ತಕ್ಕಂತೆ ಬಾಡಿಗೆ ಇರುವುದಿಲ್ಲ. ಬಾಡಿಗೆ ಕಡಿಮೆ ಇದ್ದರೂ, ಮುಂಗಡ ಪಾವತಿ ಹಣ ಊಹೆಗೂ ಮೀರಿದಷ್ಟು ಇರುತ್ತದೆ. ಇನ್ನೂ ಕೆಲವೆಡೆ ಉತ್ತಮ ರೀತಿಯ ಸೌಲಭ್ಯ ಹೊಂದಿರುವ ಮನೆ/ಫ್ಲ್ಯಾಟ್ಗಳು ಇರುವುದಿಲ್ಲ. ಸದ್ಯ ಈ ಮಹಿಳೆಗೂ ಇದೇ ಅನುಭವವಾಗಿದೆ. ಐಟಿ ಸಿಟಿಯಲ್ಲಿ ಒಂದು ಫ್ಲ್ಯಾಟ್ ನೋಡಿದ ಈಕೆ, ಅದರ ಬಾಡಿಗೆ ಕೇಳಿ ಮೊದಲು ಓಕೆ ಅಂದಿದ್ದಾಳೆ. ಆದರೆ, ಅಲ್ಲಿಗೆ ಹೋಗಿ, ಒಳಗೆ ನೋಡಿ, ನಂತರ ಅಡ್ವಾನ್ಸ್ ಹಣ ಎಷ್ಟು ಎಂದಾಗ, ಆಕೆಗೆ ಒಂದು ನಿಮಿಷ ನಿಂತಲ್ಲೇ ತಲೆತಿರುಗಿ ಬೀಳುವಂತಾಗಿದೆ.
ಹರ್ನಿಧ್ ಕೌರ್ ಎಂಬ ಮಹಿಳೆ, ತಾನು ನೋಡಿದ ಫ್ಲ್ಯಾಟ್ಗೆ 40,000 ರೂ. ಬಾಡಿಗೆ ಕೊಡಬೇಕು. ಅದಕ್ಕೂ ಮೊದಲು ಮುಂಗಡ ಪಾವತಿಯಾಗಿ ಐದು ಲಕ್ಷ ರೂಪಾಯಿ ನೀಡಬೇಕು ಎಂದು ಮಾಲೀಕರು ಹೇಳಿದ ಕೂಡಲೇ ಶಾಕ್ ಆಗಿದ್ದಾರೆ. ಮೊದಲಿಗೆ ಫ್ಲ್ಯಾಟ್ ಏನು ಹೇಳಿಕೊಳ್ಳುವಂತೆ ಇಲ್ಲ. ಅದನ್ನೂ ಮೀರಿ, ಇಷ್ಟೊಂದು ಠೇವಣಿ ಹಣ ಏಕೆ ಕೊಡಬೇಕು? ಇದು ಮಾಸಿಕ ಬಾಡಿಗೆಗಿಂತ ಸುಮಾರು 12 ಪಟ್ಟು ಹೆಚ್ಚಿದೆ ಎಂದು ಆಕೆ ತಮ್ಮ ಜಾಲತಾಣದ ಖಾತೆಯಲ್ಲಿ ಬರೆದು, ಬೇಸರ ಹೊರಹಾಕಿದ್ದಾರೆ. ಈ ಪೋಸ್ಟ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).