

ಮಲಗಿಕೊಂಡಾಗ ಕತ್ತು ಬಿಗಿದು ಅಟ್ಟಹಾಸ ಮೆರೆದ ದುಷ್ಕರ್ಮಿಗಳು
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಹಿಳೆಯೊಬ್ಬರಿಗೆ ವಿಷವುಣಿಸಿ ಕತ್ತಿಗೆ ದಾರದಿಂದ ಬಿಗಿದು ಕೊಲೆ ಮಾಡಿದ ಘಟನೆ ಜೇವರ್ಗಿ ತಾಲೂಕಿನ ಕಲ್ಲೂರ (ಕೆ) ಗ್ರಾಮದಲ್ಲಿ ಶನಿವಾರ ನಡೆದಿದೆ.
ಭಾಗ್ಯಮ್ಮ ಬಸವರಾಜ ಬಗಲೂರ (೩೮) ಕೊಲೆಯಾಗಿರುವ ಮಹಿಳೆ. ಕೊಲೆಯನ್ನು ಯಾರು ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ಪತ್ತೆಯಾಗಿಲ್ಲ.
ಕಲಬುರಗಿ ತಾಲೂಕಿನ ಹೇರೂರ (ಬಿ) ಗ್ರಾಮದ ಭಾಗ್ಯಮ್ಮಳನ್ನು ಕಲ್ಲೂರ (ಕೆ) ಗ್ರಾಮದ ಬಸವರಾಜಗೆ ಕೊಟ್ಟು ಮದುವೆ ಮಾಡಲಾಗಿತ್ತು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತಿ ೧೫ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ.
ಕೊಲೆಯಾಗಿರುವ ಭಾಗ್ಯಮ್ಮಳ ಸಹೋದರ ಸಿದ್ದಪ್ಪ ಇಮ್ಮಡಿಗೆ, ತಂಗಿಯ ಮೈದುನ ಮಲ್ಲಪ್ಪ ಕರೆ ಮಾಡಿ, ಮನೆಯಲ್ಲಿ ನಿಮ್ಮ ತಂಗಿ ಮೃತಪಟ್ಟಿದ್ದಾಳೆ. ಬೇಗ ಬನ್ನಿ ಎಂದಾಗ ಎಲ್ಲರು ಸೇರಿಕೊಂಡು ಕಲ್ಲೂರಿಗೆ ದೌಡಾಯಿಸಿದ್ದಾರೆ.
ಮನೆಯ ಪಡಸಾಲೆಯಲ್ಲಿ ಮಲಗಿದ್ದ ಭಾಗ್ಯಮ್ಮಳಿಗೆ ಜು.೩ ಮಧ್ಯರಾತ್ರಿಯಿಂದ ೪ ನಸುಕಿನ ಜಾವದ ಹೊತ್ತಿನಲ್ಲಿ ಯಾರು ದುಷ್ಕರ್ಮಿಗಳು ವಿಷ ಕುಡಿಸಿದ್ದಾರೆ. ಅಲ್ಲದೆ ಕತ್ತಿಗೆ ಯಾವುದೋ ವಸ್ತುವಿನಿಂದ ಬಿಗಿದು ಯಾರೋ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಇಶಾ ಪಂತ್, ಡಿವೈಎಸ್ಪಿ ಉಮೇಶ ಚಿಕ್ಕಮಠ, ಸಿಪಿಐ ಪರಶುರಾಮ ವನಂಜೆಕರ್, ಪಿಎಸ್‌ಐ ಅಶೋಕ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.