

ಹೊಳೆನರಸೀಪುರ: ಹೆಣ್ಣಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯನೀಯ ಸ್ಥಾನಮಾನವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ್ ಹೇಳಿದರು.
ಬುಧವಾರ ಪಟ್ಟಣದ ಕುರುಹಿನ ಶೆಟ್ಟಿ ಸಮುದಾಯ ಭವನದಲ್ಲಿ ಕುರುಹಿನ ಶೆಟ್ಟಿ ಮಹಿಳಾ ಸಮಾಜ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಕಾನೂನು ಅರಿವು ನೆರವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲೂ ಹೆಣ್ಣಿಗೆ ಸ್ವ-ಅಭಿವ್ಯಕ್ತಿ ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ವಚನಕಾರರಾದ ಅಕ್ಕಮಹಾದೇವಿ ಸಂಚಿಹೊನ್ನಮ್ಮ, ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಬಾಹ್ಯಾಕಾಶ ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ಅವರ ಸಾಧನೆ ಎಲ್ಲರಿಗೂ ಮಾದರಿ. ತೊಟ್ಟಿಲು ತೂಗುವ ಕೈಗಳು ಜಗತ್ತನ್ನೇ ಜಯಿಸುವ ಶಕ್ತಿ ಇದೆ ಎಂಬುದನ್ನು ಸಾಬೀತು ಮಾಡಿರುವ ಉದಾಹರಣೆಗಳು ನಮ್ಮ ಕಣ್ಣೆದುರುಗಿವೆ. ಇಂತಹ ನಿದರ್ಶನಗಳಿಂದ ಪ್ರೇರಿತರಾದ ಮಹಿಳೆಯರು ಸಮಾಜದಲ್ಲಿ ಧೈರ್ಯದಿಂದ ಮುನ್ನಡೆಯಬೇಕು ಎಂದು ಹುರಿದುಂಬಿಸಿದರು.
ಫೋಕ್ಸೋ, ವರದಕ್ಷಿಣೆ ಕಾಯ್ದೆ, ಸಮಾನ ಆಸ್ತಿ ಹಕ್ಕು, ನೀಡುವ ಮೂಲಕ ಮಹಿಳೆಯರ ಅಭಿವೃದ್ಧಿಗೆ ಸರ್ಕಾರಗಳು ಕಾನೂನು ಜಾರಿ ಮಾಡಿವೆ. ಹೆಣ್ಣಿನ ರಕ್ಷಣೆಗಾಗಿ ಉಚಿತವಾಗಿ ನೆರವು ನೀಡಲು ಕಾನೂನು ಸೇವೆಗಳ ಸಮಿತಿ ಸದಾ ಸಿದ್ಧವಿದೆ. ಕಾನೂನಿನ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಇತರರಿಗೂ ಅರಿವು ಮೂಡಿಸಬೇಕು. ಮಹಿಳೆಯರು ಅಂಜದೆ ಅಳುಕದೆ ತಮ್ಮ ಸಮಸ್ಯೆಗಳ ನಿವಾರಣೆಗೆ ಕಾನೂನಿನ ನೆರವು ಪಡೆದುಕೊಂಡು ಮುನ್ನಡೆಯಬೇಕು. ಮನೆೆಯಲ್ಲಿ ಅಥವಾ ಪತಿಯಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅನ್ಯಾಯವಾಗುತ್ತಿದ್ದರೆ ಕಾನೂನಿನ ನೆರವು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಿವಿಲ್ ನ್ಯಾಯಾಧೀಶೆ ಚೇತನಾ ಮಾತನಾಡಿ, ಮಹಿಳೆಯರ ನೆರವಿಗಾಗಿ ಇರುವ ಕಾನೂನನ್ನು ದುರುಪಯೋಗ ಮಾಡಿಕೊಳ್ಳದೆ, ಸದುಪಯೋಗ ಮಾಡಿಕೊಳ್ಳಬೇಕು. ಅನನುಕೂಲಗಳು ಮಹಿಳೆಯರಿಗೆ ಮಾರಕವಾಗಬಾರದು. ವಿಶ್ವದಲ್ಲಿ ಮಹಿಳೆಯರಿಗೆ ಅಗಾಧ ಗೌರವ ಸ್ಥಾನಮಾನಗಳಿವೆ. ಅದಕ್ಕೆ ಧಕ್ಕೆಯಾಗದ ರೀತಿ ಮಹಿಳೆಯರು ಮುನ್ನಡೆಯಬೇಕು. ಸಮಾಜದ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಾರೆ ಜತೆಗೆ ಹಲವಾರು ಘಟನೆಗಳು ಸಂದರ್ಭಗಳು ಒದಗಿ ಬರುತ್ತವೆ ಹಾಗೂ ಹಲವು ಜನರ ಒಡನಾಟ ದೊರೆಯುತ್ತದೆ ಇವೆಲ್ಲವುಗಳನ್ನ ದಿಟ್ಟತನದಿಂದ ಗೌರವಯುತವಾಗಿ ಎದುರಿಸಿ ಮುನ್ನಡೆದಾಗ ಗೌರವ ಸ್ಥಾನಗಳು ಮುಂದುವರಿಯುತ್ತವೆ ಎಂದು ಹೇಳಿದರು. ಹೆಣ್ಣನ್ನು ನೋಡಿದವರಿಗೆ ಪೂಜ್ಯನೀಯ ಭಾವನೆ ಬರಬೇಕು ಆ ರೀತಿಯ ಸನ್ಮಾರ್ಗದಲ್ಲಿ ಮಹಿಳೆಯರ ನಡೆ ಮುಂದುವರಿಯಬೇಕು ಎಂದು ಹೇಳಿದರು.
ಲಿಂಗಪತ್ತೆಯಂತಹ ಪ್ರಕರಣಗಳು ಸಮಾಜಕ್ಕೆ ಮಾರಕವಾಗಿವೆ. ಮಹಿಳೆಯರು ಕಾನೂನಿನ ಅರಿವು ತಿಳಿದುಕೊಂಡು ಅನ್ಯಾಯವಾದಾಗ ಕಾನೂನಿನ ನೆರವು ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ ಮಾತನಾಡಿ, ಹಿರಿಯರನ್ನು ಪೂಜ್ಯ ಭಾವನೆಯಿಂದ ಗೌರವಯುತವಾಗಿ ಕಾಣಬೇಕು. ಇವರನ್ನು ತಾತ್ಸರ ಮಾಡಿದರೆ, ಸಾಧಿಸುವುದೆಲ್ಲವೂ ಶೂನ್ಯ. ಜೀವನ ನಿರರ್ಥಕವಾಗುತ್ತದೆ. ಮನೆಯಲ್ಲಿ ಮಹಿಳೆಯರು ಸುಸಂಸ್ಕೃತರಾದರೆ, ಸಮಾಜವೇ ಸಂಸ್ಕಾರ ಭರಿತವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಎಚ್‌ಎಸ್ ಸುದರ್ಶನ, ಕಾರ್ಯದರ್ಶಿ ಸುಬ್ರಹ್ಮಣ್ಯ, ಜಯಕುಮಾರ್, ರಮೇಶ್, ಗುರುರಾಜ್ ಕುರುಹಿನ ಶೆಟ್ಟಿ ಮಹಿಳಾ ಸಮಾಜದ ಇಂದು ನಾರಾಯಣ, ಉಮಾ ಗಣೇಶ್, ನಾಗವೇಣಿ, ವೀಣಾ, ಅಶ್ವಿನಿ, ಉಷಾ ಇತರರಿದ್ದರು.