ಮಹಿಳಾ ಸಮಾನತೆಗೆ ಕಾಂಗ್ರೆಸ್ ಪಣ

nmt
Published on

ನ್ಯಾಮತಿ: ಬ್ರಿಟಿಷರ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ನಮ್ಮ ಪೂರ್ವಿಕರು ಹೋರಾಟದ ಮೂಲಕ ಹೋಗಲಾಡಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಶಾಸಕ ಡಿ.ಜಿ. ಶಾಂತನಗೌಡರು ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದ್ದು, ಹಲವು ಯೋಜನೆಗಳ ಮೂಲಕ ಮಹಿಳೆಯರ ಸಮಾನತೆಗೆ ಪಣ ತೊಟ್ಟಿದೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರ ಆಶಯಗಳಲ್ಲಿ ಒಂದಾದ ದಾಸೋಹ ಪರಂಪರೆಯನ್ನು ನಮ್ಮ ಸರ್ಕಾರ ಜಾರಿಗೆ ತಂದು, ಅನ್ನಭಾಗ್ಯ ಯೋಜನೆಯ ಮೂಲಕ ಹಸಿವು ಮುಕ್ತ ರಾಜ್ಯವಾಗಿಸಿದೆ ಎಂದರು.

ತಹಸೀಲ್ದಾರ್ ಆರ್.ವಿ. ಕಟ್ಟಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು.

ನಿವೃತ್ತ ಯೋಧರು, ಪತ್ರಕರ್ತರು, ಗೃಹರಕ್ಷಕದಳ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರು ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪಪಂ ಕಾರ್ಯನಿರ್ವಹಣಾಧಿಕಾರಿ ಗ್ರೇಡ್ 2 ತಹಸೀಲ್ದಾರ್ ಎಚ್.ಬಿ. ಗೋವಿಂದಪ್ಪ, ಕೆ.ಟಿ. ಕರಿಬಸಪ್ಪ, ಪಪಂ ಮುಖ್ಯಾಧಿಕಾರಿ ಪಿ. ಗಣೇಶ್‌ರಾವ್, ಸಬ್‌ಇನ್ಸ್‌ಪೆಕ್ಟರ್ ಬಿ.ಎಲ್. ಜಯಪ್ಪ ನಾಯ್ಕ, ಶಿಕ್ಷಕ ರಾಘವೇಂದ್ರ, ವನಜಾಕ್ಷಮ್ಮ, ಗುಂಡೂರರ ಲೋಕೇಶ್ ಇತರರು ಇದ್ದರು.

ತಾಲೂಕು ಆಡಳಿತ ಕಚೇರಿ, ಪಟ್ಟಣ ಪಂಚಾಯಿತಿ ಸೇರಿದಂತೆ ತಾಲೂಕಿನ ಸರ್ಕಾರಿ ಇಲಾಖೆ, ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net