ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರ ಪೈಪೋಟಿ

11-RNR-01
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಪೈಪೋಟಿ ಶುರುವಾಗಿದೆ.

ನಗರಸಭೆಯು ಒಟ್ಟು 35 ಸದಸ್ಯರ ಬಲಾಬಲ ಹೊಂದಿದೆ. ಅಧ್ಯಕ್ಷ ಸ್ಥಾನ ‘ಹಿಂದುಳಿದ ಅ ವರ್ಗ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿದೆ.

ಒಂದನೇ ವಾರ್ಡ್​ನ ಸದಸ್ಯೆ ರೂಪಾ ಚಿನ್ನಿಕಟ್ಟಿ, 17ನೇ ವಾರ್ಡ್​ನ ಕವಿತಾ ಹೆದ್ದೇರಿ, 22ನೇ ವಾರ್ಡ್​ನ ಉಷಾ ಚಿನ್ನಿಕಟ್ಟಿ, 29ನೇ ವಾರ್ಡ್​ನ ಹೊನ್ನವ್ವ ಕಾಟಿ, 15ನೇ ವಾರ್ಡ್​ನ ರತ್ನವ್ವ ಪೂಜಾರ ಸೇರಿ ಬಿಜೆಪಿಯಲ್ಲಿ ಹಿಂದುಳಿದ ಅ (ಮಹಿಳೆ) ವರ್ಗಕ್ಕೆ ಸೇರಿದ 5 ಸದಸ್ಯೆಯರು ಇದ್ದಾರೆ. ಕಾಂಗ್ರೆಸ್​ನಲ್ಲಿ 3ನೇ ವಾರ್ಡ್​ನ ಚಂಪಕ ಬಿಸಲಹಳ್ಳಿ, ಜಯಶ್ರೀ ಪಿಸೆ ಸೇರಿ ಇಬ್ಬರು ಹಾಗೂ ಕೆಪಿಜೆಪಿಯಲ್ಲಿ 14ನೇ ವಾರ್ಡ್​ನ ಸದಸ್ಯೆ ಅರೀಫಾಖಾನಂ ಸೌದಾಗರ ಈ ವರ್ಗಕ್ಕೆ ಸೇರಿದ್ದಾರೆ.

ನಗರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ 15, ಕಾಂಗ್ರೆಸ್​ನಿಂದ 9, ಕೆಪಿಜೆಪಿಯಿಂದ 9 ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಸಂಸದ, ಶಾಸಕರ ಮತ ಸೇರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 20 ಮತ ಬೇಕು. 15 ಸದಸ್ಯರ ಬಲ ಇರುವ ಬಿಜೆಪಿಗೆ ಅಧಿಕಾರದ ಗದ್ದುಗೆ ಏರಲು ಇನ್ನೂ ಐವರು ಸದಸ್ಯರ ಬೆಂಬಲ ಬೇಕು. ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ ಪೂಜಾರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ ಅವರ ಮೂರು ಮತಗಳು ಬಿಜೆಪಿ ಬೆಂಬಲಕ್ಕೆ ಬರುತ್ತವೆ. ಹೀಗಾಗಿ, ಒಟ್ಟಾರೆ ಬಿಜೆಪಿ ಬೆಂಬಲಿಸುವ ಸದಸ್ಯರ ಸಂಖ್ಯೆ 18ಕ್ಕೆ ಏರುತ್ತದೆ. ಹೀಗಿದ್ದರೂ, ಇನ್ನೂ ಎರಡು ಮತಗಳ ಕೊರತೆ ಉಂಟಾಗುತ್ತದೆ. ಈ ಕೊರತೆಯನ್ನು ಪಕ್ಷೇತರರು ಇಲ್ಲವೇ ಕೆಪಿಜೆಪಿ ಸದಸ್ಯರನ್ನು ಸೆಳೆಯುವ ಮೂಲಕ ಬಿಜೆಪಿ ತುಂಬಿಕೊಳ್ಳಬೇಕಾಗುತ್ತದೆ.

ಕಾಂಗ್ರೆಸ್ ಹಾಗೂ ಕೆಪಿಜೆಪಿ ತಲಾ 9 ಸದಸ್ಯರನ್ನು ಹೊಂದಿದೆ. ಈ ಎರಡೂ ಪಕ್ಷದವರು ಹೊಂದಾಣಿಕೆ ಮಾಡಿಕೊಂಡರೆ, ಬಹುಮತಕ್ಕೆ ಇನ್ನೂ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲದ ಅಗತ್ಯ ಬೇಕಾಗುತ್ತದೆ.

ರೂಪಾ, ಕವಿತಾ, ಚಂಪಕ ಹೆಸರು ಮುಂಚೂಣಿಗೆ: ಬಿಜೆಪಿಯಿಂದ ರೂಪಾ ಚಿನ್ನಿಕಟ್ಟಿ ಹಾಗೂ ಕವಿತಾ ಹೆದ್ದೇರಿ ಮತ್ತು ಕಾಂಗ್ರೆಸ್​ನಿಂದ ಚಂಪಕ ಬಿಸಲಹಳ್ಳಿ ಹೆಸರು ಅಧ್ಯಕ್ಷ ಸ್ಥಾನದ ಚುನಾವಣೆಗೆ ಮುಂಚೂಣಿಯಲ್ಲಿವೆ. ರೂಪಾ ಚಿನ್ನಿಕಟ್ಟಿ ಅವರ ಪತಿ ರಾಘವೇಂದ್ರ 2013ರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದರು. 2016ರಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ-ಆರ್. ಶಂಕರ ಬೆಂಬಲಿಗರಿಗೆ ಬೆಂಬಲ ನೀಡಿ ನಗರಸಭೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಪ್ರಮುಖ ಕಾರಣರಾದರು. ನಂತರ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಪತ್ನಿ ರೂಪಾ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ 583 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಕವಿತಾ ಹೆದ್ದೇರಿ ಕೂಡ ಬಿಜೆಪಿಯಲ್ಲಿ ಗುರುತಿಸಿಕೊಂಡವರು. ಕಾಂಗ್ರೆಸ್​ನ ಚಂಪಕ ಬಿಸಲಹಳ್ಳಿ ಪಕ್ಷದಲ್ಲಿ ಗುರುತಿಸಿಕೊಂಡವರು. ಈ ಮೂವರಲ್ಲಿ ಭಾರಿ ಪೈಪೋಟಿ ನಡೆದಿದೆ.

ಬಿಜೆಪಿ ಪಾಲಿಗೆ ವಾಣಿಜ್ಯ ನಗರಿ ಗದ್ದುಗೆ?: ನಗರಸಭೆ ಅಧ್ಯಕ್ಷರ ಆಯ್ಕೆ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಪ್ರತಿಷ್ಠೆಯಾಗಿದ್ದರೆ, ಉಪಚುನಾವಣೆಯಲ್ಲಿ ಸೋಲು ಕಂಡಿರುವ ಕೆ.ಬಿ. ಕೋಳಿವಾಡ ಅವರಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಉಪ ಚುನಾವಣೆಯಲ್ಲಿ ಆರ್. ಶಂಕರ ಬೆಂಬಲಿತ ಕೆಪಿಜೆಪಿಯ ನಾಲ್ಕು ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರೆ, 5 ಸದಸ್ಯರು ಕಾಂಗ್ರೆಸ್​ಗೆ ಬೆಂಬಲ ನೀಡಿದ್ದಾರೆ. ಇದೀಗ ನಗರಸಭೆ ಅಧ್ಯಕ್ಷರ ಆಯ್ಕೆಯಲ್ಲೂ ಕೆಪಿಜೆಪಿ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದರೆ ಅಧಿಕಾರದ ಗದ್ದುಗೆ ಬಿಜೆಪಿಗೆ ಸುಲಭದ ತುತ್ತಾಗಲಿದೆ. ಕೆಪಿಜೆಪಿ ಸದಸ್ಯರೆಲ್ಲರೂ ಕಾಂಗ್ರೆಸ್​ಗೆ ಬೆಂಬಲ ನೀಡಿದರೆ, ಬಿಜೆಪಿಗೆ ಸಂಸದ, ಶಾಸಕ ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲ ಅನಿವಾರ್ಯವಾಗಲಿದೆ. ಪಕ್ಷೇತರರಲ್ಲಿ ಒಬ್ಬ ಕಾಂಗ್ರೆಸ್ ಕಡೆ ವಾಲಿದರೆ, ಅಧಿಕಾರದ ಗದ್ದುಗೆ ಕಾಂಗ್ರೆಸ್ ಪಾಲಾಗಲಿದೆ. ಹೀಗಾಗಿ, 15 ಸದಸ್ಯರ ಬಲ ಇರುವ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ನಾನಾ ಕಸರತ್ತು ನಡೆಸಿದೆ. ಕೇವಲ 9 ಸದಸ್ಯರನ್ನು ಹೊಂದಿದ ಕಾಂಗ್ರೆಸ್​ನವರು ಕೂಡ ನಾನಾ ಪ್ರಯತ್ನ ನಡೆಸಿದ್ದಾರೆ.

ನಮ್ಮಲ್ಲಿ 9 ಜನ ಸದಸ್ಯರಿದ್ದು, ಕೆಪಿಜೆಪಿಯ 9 ಹಾಗೂ ಇಬ್ಬರು ಪಕ್ಷೇತರ ಸದಸ್ಯನನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆ. ಇದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. | ಶೇರುಖಾನ್ ಕಾಬೂಲಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ 18 ಮತಗಳು ಬೇಕು. ಬಿಜೆಪಿಗೆ ಸ್ಪಷ್ಟವಾದ ಬಹುಮತವಿದೆ. ಆರ್. ಶಂಕರ ನಮ್ಮ ಪಕ್ಷ ಸೇರಿದ್ದರಿಂದ ಇನ್ನೂ ಬಲ ಹೆಚ್ಚಳವಾಗಿದೆ. ಆದ್ದರಿಂದ ನಗರಸಭೆ ಬಿಜೆಪಿ ಪಾಲಾಗಲಿದೆ. | ದೀಪಕ ಹರಪನಹಳ್ಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net