ಮಹಿಳೆ ಪುರುಷರಷ್ಟೇ ಸಮಾನಳು

SRP_03-01jpj
Published on

ಶ್ರೀರಂಗಪಟ್ಟಣ: ಶಕ್ತಿ ಸ್ವರೂಪಿಣಿ ಚಾಮುಂಡೇಶ್ವರಿ ಆರಾಧನೆಯೊಂದಿಗೆ ನವರಾತ್ರಿಯ ಸಂದರ್ಭದಲ್ಲಿ ಮಹಿಳೆಯರಿಗೆ ಮಡಿಲು ತುಂಬುವ ಮೂಲಕ ಎಲ್ಲರ ಬದುಕಿನಲ್ಲಿ ತವರಿನ ಮಮತೆ ಮತ್ತು ಪ್ರೀತಿ ಸಮೃದ್ಧಿ ಕರುಣಿಸಲು ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣ ಹೊರವಲಯದ ಪಶ್ಚಿಮವಾಹಿನಿಯ ಡಿ.ಎಂ.ಎಸ್ ಚಂದ್ರವನ ಆಶ್ರಮದಲ್ಲಿ ಶುಕ್ರವಾರ ನೂತನ ಪಿರಮಿಡ್ ಧ್ಯಾನ ಕೇಂದ್ರ ಉದ್ಘಾಟಿಸಿ ಬಳಿಕ ವೇದಿಕೆಯಲ್ಲಿ ನಡೆದ 2025ನೇ ಸಾಲಿನ ಚಂದ್ರವನ ನವರಾತ್ರಿ ಉತ್ಸವ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಧಾರ್ಮಿಕ ನಂಬಿಕೆ, ಸಂಸ್ಕೃತಿ, ಸಂಪ್ರದಾಯಗಳ ನೆಲೆಗಟ್ಟಿನಲ್ಲಿ ಋಷಿ ಮುನಿಗಳ ತಪಸ್ಸುಗಳಿಂದ ರೂಪುಗೊಂಡಿದ್ದು, ಹೀಗಾಗಿ ವಿಶ್ವವನ್ನೇ ಸುತ್ತಾಡಿ ಬಂದ ಕೋವಿಡ್ ನಂತಹ ಮಾರಕ ಕಾಯಿಲೆ ಭಾರತದಂತಹ ಪುಣ್ಯ ನೆಲೆಯಲ್ಲಿ ಅಂತ್ಯಗೊಂಡಿದೆ.

ಸೆ.22ರಿಂದ ದೇಶದೆಲ್ಲೆಡೆ ನವರಾತ್ರಿ ಉತ್ಸವ ಹಾಗೂ ವಿಜಯದಶಮಿ ಆಚರಣೆ ಆಯಾ ಭಾಗದ ನೆಲೆಗಟ್ಟಿನ ವಿಶೇಷತೆಯಲ್ಲಿ ಸಂಭ್ರಮದಿಂದ ಜರುಗಿದ್ದು, ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲೂ ತಾಯಿ ಚಾಮುಂಡೇಶ್ವರಿಯನ್ನು ಶ್ರದ್ಧಾ, ಭಕ್ತಿಯ ನಂಬಿಕೆಯಿಂದ ಪೂಜಿಸಲಾಗಿದೆ. ವಿಶೇಷವಾಗಿ ಸ್ತ್ರೀಯರನ್ನು ಶಕ್ತಿ ಸ್ವರೂಪಿಣಿ ಶ್ರೀಪಾರ್ವತಿ ದೇವಿ ಪ್ರತಿರೂಪದಲ್ಲಿ ಗೌರವಿಸುವುದು ಭಾರತೀಯರ ಸಂಸ್ಕೃತಿ. ಮಹಿಳೆಯರೂ ಪುರುಷರಷ್ಟೇ ಸಮಾನತೆ ಹೊಂದಿದ್ದು, ಸರ್ವ ಕಾರ್ಯಗಳಲ್ಲೂ ನಿರ್ಧರಿಸಲು ಅರ್ಹರಿದ್ದಾರೆ. ಮಹಿಳೆಯರ ತವರು ಮಠ ಎಂದು ಕರೆಸಿಕೊಳ್ಳುವ ಸ್ಥಾನದಲ್ಲಿ ಜೀವನದಿ ಕಾವೇರಿ ತೀರದ ಚಂದ್ರವನ ಆಶ್ರಮ ಪ್ರಖ್ಯಾತಿ ಹೊಂದಿದ್ದು, ಸಾಕಷ್ಟು ವರ್ಷಗಳಿಂದ ನಿರಂತರವಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಜನರ ಆರೋಗ್ಯ ಕಾಳಜಿ ಸೇವೆಗಳ ಜತೆ ಜತೆಗೆ ಸಾವಿರಾರು ಮಹಿಳೆಯರಿಗೆ ಬಾಗಿನದ ಮೂಲಕ ಮಡಿಲು ತುಂಬಿ ಸಾಂತ್ವನ, ಸನ್ಮಾರ್ಗದ ದಿಕ್ಸೂಚಿ ನೀಡಿ ತವರು ಮನೆಯ ಶ್ರೀರಕ್ಷೆಯ ಅಭಯ ತುಂಬುತ್ತಿದ್ದು, ವಿವಿಧ ಕ್ಷೇತ್ರದ ಪ್ರಾಮಾಣಿಕ ಸಾಧಕರನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯ. ಪೀಠಾಧಿಪತಿ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗಳು ನಡೆಸುತ್ತಿರುವ ಸಾಕಷ್ಟು ಜನಹಿತ ಸತ್ಕಾರ್ಯಗಳಿಗೆ ಜತೆಯಾಗಿರುವುದು ಸಂತಸ ತರಿಸಿದೆ ಎಂದರು. ರಾಜೇಶ್ ಚಂದ್ರ, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ತಹಸೀಲ್ದಾರ್ ಚೇತನಾ ಯಾದವ್, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net