ಖಾಲಿ ಕೊಡ ಹಿಡಿದು ಮಹಿಳೆಯರ ಪ್ರತಿಭಟನೆ

Published on

ಹನೂರು: ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದ 2ನೇ ವಾರ್ಡ್‌ನ ಕ್ರೈಸ್ತ ಸಮುದಾಯದ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಬುಧವಾರ ಪ್ರತಿಭಟನೆ ನಡೆಸಿದರು.


ಬಡಾವಣೆಯಲ್ಲಿ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬಡಾವಣೆಯಲ್ಲಿ ಅನಾರೋಗ್ಯಕ್ಕೆ ಒಳಗಾದವರು, ಅಶಕ್ತರು ಹೆಚ್ಚಿನ ರೀತಿಯಲ್ಲಿ ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.


ವಾರದ ಹಿಂದೆ ಬೋರ್‌ವೆಲ್ ಕೊರೆಯುವ ಸಂಬಂಧ ಕೆಲ ಜೆಡಿಎಸ್ ಸದಸ್ಯರು ತಕರಾರು ತೆಗೆದ ಕಾರಣ ಗ್ರಾಮಸ್ಥರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಲಾರಿಯನ್ನು ವಾಪಸ್ ಕಳುಹಿಸಿದರು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಬೋರ್‌ವೆಲ್ ಕೊರೆಸುವ ಪ್ರಯತ್ನ ಮಾಡಿಲ್ಲ. ಇದೀಗ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.


ಫಾತಿಮಾ, ರೇಷ್ಮಾ, ಇನ್ನಾಸಮ್ಮ, ಮೇರಿ, ಜ್ಯೋತಿ, ಸಿಂಧೂ, ಅನಿತಾ, ಸೆಲ್ವಿ, ಪ್ಲೇವಿಯಾ, ಫಿಲೋಮಿನಾ, ರಮ್ಯಾ ಇನ್ನಿತರರು ಇದ್ದರು.
ಈ ಸಂಬಂಧ ಪಿಡಿಒ ನಂಜುಂಡಸ್ವಾಮಿ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಗ್ರಾಮದಲ್ಲಿ ಬೋರ್‌ವೆಲ್ ಕೊರೆಸುವ ಸಂಬಂಧ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net