ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

k.r
Published on

ಮೈಸೂರು: ಪೊಲೀಸ್​ ಪೇದೆ ವರದಕ್ಷಿಣೆ ಕಿರುಕುಳಕ್ಕೆ ಕೆಆರ್​ ನಗರದ ಹೆಬ್ಬಾಳು ಗ್ರಾಮದ ಗೃಹಿಣಿ ಬಲಿಯಾಗಿದ್ದಾರೆ.

ತೀವ್ರ ತರವಾದ ಸುಟ್ಟಗಾಯಗಳಿಗೆ ತುತ್ತಾಗಿದ್ದ ಭಾರತಿ (25) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪತಿ ಪೊಲೀಸ್​ ಪೇದೆ ಶ್ರೀಧರ್​ (25), ತಂದೆ ಶಂಖರ್​ ಹಾಗೂ ತಾಯಿ ನಿಂಗಾಜಮ್ಮ ವಿರುದ್ಧ ಭಾರತಿ ಪಾಲಕರು ಕೊಲೆ ಕೇಸು ದಾಖಲಿಸಿದ್ದಾರೆ.

ಏನಿದು ಪ್ರಕರಣ?: ಹೆಬ್ಬಾಳು ಗ್ರಾಮದ ಭಾರತಿ ಅವರ ವಿವಾಹ 6 ವರ್ಷಗಳ ಹಿಂದೆ ಡಿಎಆರ್​ನಲ್ಲಿ ಪೇದೆಯಾಗಿದ್ದ ಶ್ರೀಧರ್​ ಅವರ ಜತೆ ನೆರವೇರಿತ್ತು. ಮದುವೆ ವೇಳೆ ಶ್ರೀಧರ್​ಗೆ 3 ಲಕ್ಷ ನಗದು, 200 ಗ್ರಾಂ.ಚಿನ್ನ ಹಾಗೂ ಬೈಕ್​ ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆ ನಂತರ 2 ವರ್ಷ ದಂಪತಿ ಚೆನ್ನಾಗಿದ್ದರು. ನಂತರ ಶ್ರೀಧರ್​ ನಿವೇಶನ ಖರೀದಿಸಿಕೊಡುವಂತೆ ಒತ್ತಡ ತರುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ ಪತ್ನಿಗೆ ಕಿರುಕುಳ ನೀಡುತ್ತಿದ್ದ.

ಗಂಡನ ಕಿರುಕುಳ ಅಧಿಕವಾಗತೊಡಗಿದಾಗ ಭಾರತಿ ತನ್ನ ಪಾಲಕರಿಗೆ ನಿವೇಶನ ಖರೀದಿಸಿಕೊಡುವಂತೆ ಕೋರಿದ್ದರು. ನಿವೇಶನ ಖರಿದೀಗೆ ಪಾಲಕರು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಕೆರಳಿದ ಶ್ರೀಧರ್​ ಪತ್ನಿಗೆ ನಿತ್ಯವೂ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. 2 ದಿನಗಳ ಹಿಂದೆ ಭಾರತಿ ತೀವ್ರ ಸುಟ್ಟಗಾಯಗಳಿಗೆ ತುತ್ತಾಗಿದ್ದರು. ಕೂಡಲೇ ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಭಾರತಿ ಮೃತಪಡುತ್ತಿದ್ದಂತೆ ಶ್ರೀಧರ್​ ಹಾಗೂ ಅವರ ಅಪ್ಪ, ಅಮ್ಮ ತಲೆಮರೆಸಿಕೊಂಡಿದ್ದಾರೆ. ಕೆಆರ್​ನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net