

ಹ್ಯೂಸ್ಟನ್: ಕೋವಿಡ್-19 ಸಾಂಕ್ರಾಮಿಕದ ಬಗೆಗಿನ ಅಧ್ಯಯನವೊಂದು ಕರೊನಾ ವೈರಸ್ ಹುಟ್ಟಿನ ಬಗ್ಗೆ ಮಹತ್ವದ ಬೆಳಕು ಚೆಲ್ಲಿದೆ. ಇದು ಪ್ರಾಣಿಯಿಂದ ಮಾನವರಿಗೆ ಹಬ್ಬಿದ ಬಗೆ ಕುರಿತು ಆಳವಾದ ಅಧ್ಯಯನ ನಡೆಸಿದೆ. ಹೊಸ ಕರೊನಾ ವೈರಸ್ ಪ್ರಾಣಿಯಿಂದ ಮನುಷ್ಯರಿಗೆ ಪಸರಿಸುವ ಸಶಕ್ತ ವೈರಸ್ ಆಗಿದೆ. ತನ್ನ ಆಕಾರವನ್ನು ಬದಲಾಯಿಸಿಕೊಳ್ಳುವ ಹಾಗೂ ಮನುಷ್ಯರಿಗೆ ಸೋಂಕು ತಗಲಿಸುವ ಸಾಮರ್ಥ್ಯ ಹೊಂದುವ ಮೂಲಕ ಅದು ಪ್ರಾಣಿಯಿಂದ ಮಾನವರಿಗೆ ಹಬ್ಬುತ್ತದೆ ಎಂದು ಅಮೆರಿಕದ ಎಲ್ ಪಾಸೊದಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.
ಹೊಸ ಕರೊನಾ ವೈರಸ್ ಹಾಗೂ ಪ್ರಾಣಿಗಳಲ್ಲಿನ ಅದೇ ಬಗೆಯ ವೈರಸ್ಗಳ ಆನುವಂಶಿಕತೆಯ (ಜೆನೆಟಿಕ್) ವಿಶ್ಲೇಷಣೆ ನಡೆಸಿರುವ ಸಂಶೋಧಕರು, ಬಾವಲಿಗಳನ್ನು ಬಾಧಿಸುವ ವೈರಸ್ ಈಗ ಜಗತ್ತಿನಲ್ಲಿ ಸಂಕಟ ತಂದೊಡ್ಡಿರುವ ಹೊಸ ವೈರಸ್ನ ಸಮೀಪ ಬಂಧು ಆಗಿದೆ ಎಂಬುದನ್ನು ದೃಢಪಡಿಸಿದ್ದಾರೆ. ‘ಸಯನ್ಸ್ ಅಡ್ವಾನ್ಸಸ್’ ಎಂಬ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಸಾರ್ಸ್ -ಸಿಒವಿ-2 ಎಂದು ಹೆಸರಿಸಲಾಗಿರುವ ಹೊಸ ಕರೊನಾ ವೈರಸ್, ಪಂಗೊಲಿನ್ ಎಂಬ ಸಸ್ತನಿಯನ್ನು ಬಾಧಿಸುವ ಕರೊನಾ ವೈರಸ್ನ ಆನುವಂಶಿಕ ಧಾತುವಿನಿಂದ (ಜೀನ್) ಮಾನವರಿಗೆ ಸೋಂಕು ತಗಲುವ ಸಾಮರ್ಥ್ಯ ಪಡೆದಿದೆ ಎಂಬುದು ಅಧ್ಯಯನದ ಸಾರಾಂಶವಾಗಿದೆ.
ಬಾವಲಿಯಿಂದ ಸಿವೆಟ್ ಬೆಕ್ಕಿಗೆ ತಗುಲಿದ ಮೂಲ ಸಾರ್ಸ್ ಅಥವಾ ಬಾವಲಿಗಳಿಂದ ಒಂಟೆಗಳಿಗೆ ಪಸರಿಸಿ ನಂತರ ಮನುಷ್ಯರಿಗೆ ಹರಡಿದ ಮೆರ್ಸ್ನಂತೆ ಕೋವಿಡ್-19 ವೈರಸ್ ಆನುವಂಶೀಯತೆಯಲ್ಲಿ ಬದಲಾವಣೆ ಹೊಂದಿದ್ದು, ಅದು ಕ್ರಮೇಣ ಮಾನವರಿಗೆ ಹರಡುವ ಸಾಮರ್ಥ್ಯ ಪಡೆದುಕೊಂಡಿತು. | ಫೆಂಗ್ ಗಾವೊ ಅಧ್ಯಯನದ ಸಹ-ಲೇಖಕ
ಪಿಪಿಇ ಕಿಟ್ ಕಡ್ಡಾಯ
ರೈಲಿನಲ್ಲಿ ಅಧಿಕ ಜನರು ಪ್ರಯಾಣಿಸುವುದರಿಂದಾಗಿ ಸೋಂಕು ಪಸರಿಸುವಿಕೆ ಭೀತಿ ಹೆಚ್ಚಿರುವುದರಿಂದ ಪ್ರಯಾಣ ಟಿಕೆಟ್ ತಾಪಸಕರು (ಟಿಟಿಇ) ಕೂಡ ಪಿಪಿಇ ಕಿಟ್ ಧರಿಸುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ಹೊಸ ಮಾರ್ಗ ಸೂಚಿಯಲ್ಲಿ ಹೇಳಿದೆ. ಜೂನ್ 1ರಿಂದ ಸಂಚಾರ ಆರಂಭಿಸಲಿರುವ ರೈಲುಗಳಲ್ಲಿ ಟಿಟಿಇಗಳು ಕಪು್ಪ ಬಣ್ಣದ ಕೋಟ್ ಹಾಗೂ ಟೈ ಬದಲಿಗೆ ಪಿಪಿಇ ಕಿಟ್ಗಳನ್ನು ಧರಿಸಲಿದ್ದು, ತಮ್ಮ ಹೆಸರಿನ ಟ್ಯಾಗ್ಅನ್ನು ಅದರ ಮೇಲೆ ಹಾಕಿಕೊಳ್ಳಬೇಕು. ಜತೆಗೆ ಗ್ಲೌಸ್ ಮತ್ತು ಫೇಸ್ಶೀಲ್ಡ್ ಗಳನ್ನು ಹಾಕಿಕೊಂಡು, ದೈಹಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಭೂತಕನ್ನಡಿ ಮೂಲಕವೇ ಟಿಕೆಟ್ ಅಥವಾ ಇ-ಟಿಕೆಟ್ ಅನ್ನು ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.