ಮಹಿಳೆಗೆ ಗಂಭೀರ ಗಾಯ

9blrp3
Published on

ಬೇಲೂರು: ತಾಲೂಕಿನ ಪಡುವಳಲು ಗ್ರಾಮದಲ್ಲಿ ಮಂಗಳವಾರ ಸ್ಕೂಟಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಿಂದ ಸಿಟ್ಟಿಗೆದ್ದ ಗ್ರಾಮಸ್ಥರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.


ಮಂಗಳವಾರ ಬೆಳಗ್ಗೆ ಪಡುವಳಲು ಗ್ರಾಮದ ಶೋಭಾ(38) ಅವರು ಕಾರ್ಖಾನೆ ಕೆಲಸಕ್ಕೆಂದು ತಮ್ಮ ಸ್ಕೂಟಿಯಲ್ಲಿ ಪಡುವಳಲು ತಾರೀಮರ ರಸ್ತೆಯಲ್ಲಿ ತೆರಳುತಿದ್ದ ಸಂದರ್ಭ ಹಾಸನ ಕಡೆಯಿಂದ ಬೇಲೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ ಗಾಯಗೊಂಡರು.

ದಾಗ ಸ್ಕೂಟಿ ಬಸ್‌ನ ಮುಂಭಾಗದ ಚಕ್ರಕ್ಕೆ ಸಿಲುಕಿದ್ದು, ಜಖಂಗೊಂಡಿದೆ. ವಿಷಯ ತಿಳಿದ ಪಡುವಳಲು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು, ಬಸ್ ಸಂಚಾರ ತಡೆದು ಲೋಕೋಪಯೋಗಿ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಈ ಭಾಗದಲ್ಲಿ ವಾಹನಗಳು ಸಂಚರಿಸದಷ್ಟು ರಸ್ತೆಗಳು ಗುಂಡಿ ಬಿದ್ದಿದ್ದು, ತಕ್ಷಣ ದುರಸ್ತಿಗೊಳಿಸುವಂತೆ ಆಗ್ರಹಿಸಿದರು.


ಸ್ಥಳಕ್ಕಾಗಮಿಸಿದ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕಿ ಶಕೀಲಾ ಭಾನು, ಗ್ರಾಮಸ್ಥರ ವಿರುದ್ಧ ಬಸ್ ತಡೆದು ನಿಲ್ಲಿಸಿ ಪ್ರತಿಭಟಿಸಲು ಯಾರು ನಿಮಗೆ ಹೇಳಿದ್ದು ಎಂದು ಏರುದನಿಯಲ್ಲಿ ಮಾತನಾಡುತಿದ್ದಂತೆಯೇ ಪಡುವಳಲು ಗ್ರಾಮಸ್ಥರು ಡಿಪೋ ವ್ಯವಸ್ಥಾಪಕಿ ವಿರುದ್ಧವೇ ಧಿಕ್ಕಾರ ಕೂಗಿ ಪ್ರತಿಭಟನೆಯನ್ನೂ ಮತ್ತಷ್ಟು ತೀವ್ರಗೊಳಿಸಿದರು. ನಂತರ ತಹಸಿಲ್ದಾರ್ ಎಂ.ಮಮತಾ ಗ್ರಾಮಸ್ಥರನ್ನು ಸಮಾಧಾನಪಡಿಸಿ ಸದ್ಯಕ್ಕೆ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.


ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಮಹೇಶ್ ಮಾತನಾಡಿ, ನಾವು ವರ್ಷಕ್ಕೆ ಮೂರು ಬಾರಿ ರಸ್ತೆ ಸರಿಪಡಿಸುವುದಕ್ಕೆ ಅನುದಾನ ಕೋರಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇಲ್ಲಿವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ವಿಚಾರವಾಗಿ ತಕ್ಷಣವೇ ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.


ಅಪಘಾತದಲ್ಲಿ ಗಾಯಗೊಂಡ ಶೋಭಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net