ಸಿದ್ದಾಪುರ: ಕೆರೆಯಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ಚೌಡೇಶ್ವರಿನಗರದ ಯುವಕರಿಬ್ಬರು ರಕ್ಷಿಸಿದ್ದಾರೆ.
ಅಮ್ಮತ್ತಿಯ ಕಾರ್ಮಾಡು ಗ್ರಾಮದ ಚೌಡೇಶ್ವರಿನಗರದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಶನಿವಾರ ಸಂಜೆ ಅಲ್ಲಿನ ಕೆರೆಯಲ್ಲಿ ವಿಸರ್ಜಿಸಲು ಮೆರವಣಿಗೆಯ ಮುಖಾಂತರ ಸ್ಥಳೀಯರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚೌಡೇಶ್ವರಿನಗರದ ಮಹಿಳೆ ಕೆರೆಯ ಇನ್ನೊಂದು ಬದಿಯಲ್ಲಿ ನಿಂತು ವಿಸರ್ಜನಾ ಕಾರ್ಯಕ್ರಮವನ್ನು ನೋಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮಹಿಳೆ ಕೆಸರಿಗೆ ಕಾಲು ಸಿಲುಕಿ ಜಾರಿ ಕೆರೆಗೆ ಬಿದ್ದಿದ್ದಾರೆ.
ಮಹಿಳೆ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ ಅಮ್ಮತ್ತಿ ಕಾರ್ಮಾಡು ಗ್ರಾಮದ ಚೌಡೇಶ್ವರಿನಗರದ ನಿವಾಸಿಗಳಾದ ಶಿವಕುಮಾರ್ ಮತ್ತು ಸಂಕೇತ್ ಕೆರೆಗಿಳಿದು ಆಕೆಯನ್ನು ರಕ್ಷಿಸಿದ್ದಾರೆ.