ಮತ ಪ್ರಚಾರಕ್ಕೆ ‘ಸ್ತ್ರೀ’ ಶಕ್ತಿ

sindhanour-PM-Modi-Assembly-election-campaign1
??????????
Published on
  • ರಂಗು ಪಡೆದ ಲೋಕ ಸಮರ *ಮತದಾರರ ಸೆಳೆಯಲು ನಾನಾ ಕಸರತ್ತು


ಗಂಗಾಧರ್ ಬೈರಾಪಟ್ಟಣ ರಾಮನಗರ

ಲೋಕ ಸಮರ ರಂಗು ಪಡೆದುಕೊಂಡಿದ್ದು, ಚುನಾವಣೆ ಗೆಲ್ಲುವ ತವಕ ಎಲ್ಲ ರಾಜಕೀಯ ಪಕ್ಷಗಳ ಅಜೆಂಡಾವಾಗಿದೆ. ಇದಕ್ಕಾಗಿ ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿದೆ.


ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಬಿರು ಬೇಸಿಗೆ ನಡುವೆಯೇ ಪ್ರಚಾರ ನಡೆಸುತ್ತಿದ್ದು, ಪ್ರಚಾರಕ್ಕೆ ಪ್ರಮುಖವಾಗಿ ಮಹಿಳೆಯರೇ ಶಕ್ತಿಯಾಗಿದ್ದಾರೆ. ವಿವಿಧ ಸ್ತ್ರೀ ಶಕ್ತಿ ಸಂಘಗಳು, ಒಕ್ಕೂಟಗಳನ್ನು ಟಾರ್ಗೆಟ್ ಮಾಡಿಕೊಂಡು ಪ್ರಚಾರಕ್ಕೆ ಇಳಿದಿರುವ ಸ್ಥಳೀಯ ಮುಖಂಡರು ಸಂಘದ ಮೂಲಕ ಮತ ಪಡೆಯುವ ಯತ್ನಕ್ಕೂ ಕೈ ಹಾಕಿದ್ದಾರೆ.

ಸ್ತ್ರೀ ಶಕ್ತಿ ಸಂಘಗಳೇ ಟಾರ್ಗೆಟ್ :

ಸ್ತ್ರೀ ಶಕ್ತಿಗಳು ಸೇರಿ ವಿವಿಧ ಸಂಸ್ಥೆಗಳಡಿಯಲ್ಲಿ ಸಾಲ ಸೌಲಭ್ಯ ಪಡೆದು ಸ್ವಾವಲಂಬಿಯಾಗಿರುವ ಹಲವು ಗುಂಪುಗಳು ಜಿಲ್ಲೆಯಲ್ಲಿ ಇವೆ. ಪ್ರತಿ ಗ್ರಾಮದಲ್ಲಿ ಕೇರಿಗೊಂದರಂತೆ, ನಗರ ಪ್ರದೇಶದಲ್ಲಿ ಅಡ್ಡ ರಸ್ತೆಗೆ ಒಂದರಂತೆ ಸ್ತ್ರೀ ಶಕ್ತಿ ಸಂಘಗಳು ಮಹಿಳಾ ಒಕ್ಕೂಟಗಳು ಸಕ್ರಿಯವಾಗಿದೆ. ಈ ಸಂಘಗಳ ಕದ ತಟ್ಟುತ್ತಿರುವ ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಅವರಿಗೆ ಆಮಿಷ ಒಡ್ಡುತ್ತಿದ್ದಾರೆ. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಏನೆಲ್ಲ ಕೊಡುಗೆ ನೀಡಿದೆ ಎನ್ನುವುದನ್ನು ಖಾತ್ರಿ ಮಾಡಿಕೊಡುವ ನೆಪದಲ್ಲಿ ಒಂದೆಡೆ ಎಲ್ಲರನ್ನೂ ಸೇರಿಸುವ ಮುಖಂಡರು, ನಂತರ ಮತಕ್ಕಾಗಿ ನಾವೇನು ಮಾಡಬೇಕೆನ್ನುವ ಪ್ರಶ್ನೆಯನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ.

ನಮಗೆ ಮತ ಹಾಕಿಸಿ:

ರಾಜ್ಯ ಸರ್ಕಾರ ಗ್ಯಾರಂಟಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅತ್ತ ಬಿಜೆಪಿಗರಿಗೆ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಮಹಿಳಾ ಸಬಲೀಕರಣದ ಯೋಜನೆಗಳೇ ಆಸರೆ. ಆದರೆ, ಕೆಲ ನಾಯಕರು ಒಂದು ಹೆಜ್ಜೆ ಮುಂದಿಟ್ಟು ನಿಮ್ಮ ಸಂಘಕ್ಕೆ ಇಂತಿಷ್ಟು ಹಣ ನೀಡುತ್ತೇವೆ. ನಿಮ್ಮ ಗುಂಪಿನ ಎಲ್ಲ ಸದಸ್ಯರ ಮತ ನಮಗೇ ದೊರಕಲಿ ಎನ್ನುವ ಬೇಡಿಕೆ ಮುಂದಿಡುತ್ತಿದ್ದಾರೆ. ಈ ವೇಳೆ ಕೆಲವು ಸಂಘಗಳು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಉದಾಹರಣೆಗಳು ಇವೆ ಎಂದು ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ಮಾಹಿತಿ ನೀಡಿದರು. ಆದರೆ, ಸಂಘದ ಬೇಡಿಕೆ ಈಡೇರಿಸುವ ಸಂಬಂಧ ನಾಯಕರೊಟ್ಟಿಗೆ ಮಾತನಾಡಿ ತೀರ್ಮಾನಿಸುವುದಾಗಿ ಹೇಳಿ ವಾಪಾಸ್ ಬಂದಿರುವ ಉದಾಹರಣೆಗಳು ಇವೆ.

ಪ್ರಚಾರಕ್ಕೂ ಮಹಿಳೆಯರು


ಒಂದೆಡೆ ಮಹಿಳೆಯರನ್ನು ಸೆಳೆಯುವ ಸಲುವಾಗಿ ಸ್ತ್ರೀ ಸಂಘಗಳ ಕದ ತಟ್ಟುತ್ತಿರುವ ನಡುವೇಯೆ ರಾಜಕೀಯ ಸಭೆ ಸಮಾರಂಭಗಳಿಗೆ ಮಹಿಳೆಯರನ್ನೇ ಆಶ್ರಯಿಸಿದ್ದಾರೆ. ಗ್ರಾಮೀಣ ಅಭ್ಯರ್ಥಿಗಳು ಮತ್ತು ಆಯಾ ಪಕ್ಷದ ನಾಯಕರು ಪ್ರಚಾರಕ್ಕೆ ತೆರಳುವ ವೇಳೆ ಜನದಟ್ಟಣೆ ಇಲ್ಲದಿದ್ದರೆ ಅಸಮಾಧಾನಗೊಳ್ಳುತ್ತಾರೆ ಎನ್ನುವ ಆತಂಕದ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಮಹಿಳೆಯರನ್ನು ಹೆಚ್ಚಾಗಿ ಪ್ರಚಾರಕ್ಕೆ ಕರೆತರುತ್ತಾರೆ. ಇನ್ನು ದೊಡ್ಡ ಸಮಾರಂಭಗಳಿಗೂ ಮಹಿಳೆಯರೇ ಶಕ್ತಿಯ ಮೂಲವಾಗಿದ್ದಾರೆ.


ಆರ್ಥಿಕ ಶಕ್ತಿ

ಚುನಾವಣೆ ಮಹಿಳೆಯರ ಪಾಲಿಗೆ ಆರ್ಥಿಕ ಮೂಲವಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಚಾರಕ್ಕೆ ಅಭ್ಯರ್ಥಿ ಬಂದು ಹೋಗುವ ಸಂದರ್ಭದಲ್ಲಿ ನಿಂತಿರೆ 100-200 ರೂ. ಗಳವರೆಗೆ ನೀಡಲಾಗುತ್ತಿದೆ. ಇದೇ ರೀತಿ ನಗರ ಪ್ರದೇಶದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರೆ 500 ರೂ.ವರೆಗೂ ಸಂಪಾದನೆ ಇದೆ ಎನ್ನುತ್ತಾರೆ ಮಹಿಳೆಯರು. ಆದರೆ, ಇವರಿಗೆ ಪಕ್ಷಗಳ ಚಿಂತೆ ಇಲ್ಲ. ಪ್ರಸ್ತುತ ಬರಗಾಲವಾಗಿರುವ ಕಾರಣ ಹಣ ಕೊಟ್ಟರಷ್ಟೇ ಪ್ರಚಾರದಲ್ಲಿ ಮಹಿಳೆಯರು ಪಾಲುರಾದರಾಗುತ್ತಿದ್ದಾರೆ.

ಆಯೋಗ ಗಮನ ಹರಿಸಬೇಕಿದೆ


ಒಂದೆಡೆ ಸರ್ಕಾರ ಕಟ್ಟು ನಿಟ್ಟಿನ ಚುನಾವಣೆ ನಡೆಸುವ ಮಾತುಗಳನ್ನು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ, ರಂಗೋಲೆ ಕೆಳಗೆ ನುಸುಳುವ ರಾಜಕೀಯ ಮುಖಂಡರು ಬಹುತೇಕ ಹಣ ತೆತ್ತೇ ಚುನಾವಣ ಪ್ರಚಾರಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net