

ಸಿಂಧನೂರು: ಬಲಿಷ್ಠ ಸಂಘಟನೆ, ಬದಲಾದ ಬಂಡಾಯವೇ ಮಹಿಳಾ ವಿಮೋಚನೆಗೆ ದಾರಿ ಎಂದು ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೆಲ್ವಿ ಹೇಳಿದರು.
ಇದನ್ನೂ ಓದಿ: ಬಂಡಾಯ ಸಾಹಿತ್ಯದ ಶ್ರೇಷ್ಠ ಸಾಹಿತಿ ಚಂಪಾ
ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಶನಿವಾರ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ಸೇರಿ ವಿವಿಧ ದೇಶಗಳಲ್ಲಿ ಮಹಿಳಾ ಸಮಾನತೆ, ಸ್ವಾತಂತ್ರ್ಯ ಮತ್ತು ತಾರತಮ್ಯವಿಲ್ಲದ ಜೀವನಕ್ಕಾಗಿ ಹೋರಾಟ ನಡೆಯುತ್ತಿದೆ.
ಈಗ ಪ್ಯಾಲೆಸ್ಟೈನ್ ಮೇಲೆ ನಡೆಯುತ್ತಿರುವ ಜಿಯೋನಿಷ್ಟ್ ಯುದ್ಧದ ವಿರುದ್ಧ ಗಾಜಾದ ಮಹಿಳೆಯರು ಮತ್ತು ಮಕ್ಕಳು ಅಂಗೈಯಲ್ಲಿ ಜೀವ ಹಿಡಿದು ಹೋರಾಡುತ್ತಿದ್ದಾರೆ. ಈ ದೇಶದಲ್ಲಿ ಮಹಿಳೆಯರು, ದಲಿತರು ಹಾಗೂ ಬಡವರಿಗೆ ಮತದಾನದ ಹಕ್ಕು ಇರಲಿಲ್ಲ. ಅದಕ್ಕಾಗಿ ಅತಿ ದೊಡ್ಡ ಚಳವಳಿಯಾಗಿದೆ. ಇದಕ್ಕೆ ಕಮ್ಯುನಿಸ್ಟರ ಜತೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಬಹಳಷ್ಟಿದೆ. ಈ ಹೋರಾಟದಿಂದಲೇ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತು ಎಂದರು.
ಕ್ರಾಂತಿಕಾರಿ ಮಹಿಳಾ ಸಂಘಟನೆಯ ರಾಜ್ಯ ಸದಸ್ಯೆ ರುಕ್ಮಿಣಿ ಗೆಜ್ಜಲಗಟ್ಟಾ, ಗ್ರಾಕೂಸ ಮಹಿಳಾ ಸಂಘಟನೆ ಕಾರ್ಯದರ್ಶಿ ವಿರುಪಮ್ಮ, ಎಂಎಂಎಸ್ ಮಹಿಳಾ ಸಂಘಟನೆ ಅಧ್ಯಕ್ಷೆ ವಿಜಯರಾಣಿ, ವಸತಿ ನಿಲಯ ಕಾರ್ಮಿಕ ಸಂಘದ ಸದಸ್ಯರಾದ ಮಹಾನಂದ, ಚನ್ನಮ್ಮ, ತುಳಸಮ್ಮ, ದೇವಮ್ಮ, ನಸ್ರೀನಾ ಬೇಗಂ, ಹಂಪಮ್ಮ, ರೇಣುಕಾ, ಹೊನ್ನಮ್ಮ, ಈರಮ್ಮ, ಲಕ್ಷ್ಮೀ, ಗಂಗಮ್ಮ, ಮುದಿಯಪ್ಪ, ಎಚ್.ಆರ್. ಹೊಸಮನಿ, ಧರಗಯ್ಯ ಇದ್ದರು.