

ನರಗುಂದ: ಚಂಪಾ ಹೆಸರಿನಿಂದಲೇ ಪ್ರಸಿದ್ಧರಾಗಿದ್ದ ಚಂದ್ರಶೇಖರ ಪಾಟೀಲರು ಈ ನಾಡು ಕಂಡ ಅಪ್ರತಿಮ ಹೋರಾಟಗಾರ. ಅದು ಗೋಕಾಕ ಚಳವಳಿ ಇರಲಿ, ಕನ್ನಡಪರ, ದಲಿತಪರ ಹೋರಾಟವೇ ಆಗಿರಲಿ. ಅಲ್ಲೆಲ್ಲ ಚಂಪಾ ಛಾಪು ಕಾಣಿಸಲೇಬೇಕು. ಒಮ್ಮೆ ಅವರು ಕೈಹಿಡಿದ ಹೋರಾಟವನ್ನು ಎಂದಿಗೂ ಅರ್ಧಕ್ಕೆ ಬಿಟ್ಟವರಲ್ಲ. ಸಾಹಿತ್ಯದ ವಿಷಯದಲ್ಲಿಯೂ ಹಾಗೇಯೆ. ಬಂಡಾಯ ಸಾಹಿತ್ಯದ ಶ್ರೇಷ್ಠ ಸಾಹಿತಿ ಅವರಾಗಿದ್ದರು ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಹೇಳಿದರು.
ತಾಲೂಕಿನ ಶಿರೋಳ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ, ಶ್ರೀ ಗುರು ಬಸವ ಜನಕಲ್ಯಾಣ ಮತ್ತು ಶಿಕ್ಷಣ ಸಂಸ್ಥೆ, ಶ್ರೀ ತೋಂಟದಾರ್ಯ ಮಠ ಶಿರೋಳ, ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಕೇಂದ್ರ ಶಿರೋಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ, ಏಕೀಕರಣ ಯೋಧರ ಯಶೋಗಾಥೆ-35ರ ಸಮಾರಂಭದಲ್ಲಿ ಪೊ›. ಚಂದ್ರಶೇಖರ ಪಾಟೀಲರ ಬದುಕು ಮತ್ತು ಹೋರಾಟದ ಕುರಿತು ಉಪನ್ಯಾಸ ನೀಡಿದರು.
ಚಂಪಾ ತಮ್ಮಲ್ಲಿ ಗಟ್ಟಿತನ ಹೊಂದಿದ್ದ ವ್ಯಕ್ತಿಯಾಗಿದ್ದರು. ಎಂಥ ಸಂದರ್ಭವಿದ್ದರೂ, ಎಂಥವರನ್ನೇ ಎದುರು ಹಾಕಿಕೊಳ್ಳಬೇಕೆಂದರೂ ಎದೆಗುಂದುತ್ತಿರಲಿಲ್ಲ. ನೇರ-ದಿಟ್ಟ-ನಿರಂತರ ಎಂಬ ಶಬ್ದಗಳು ಯಾರಿಗಾದರೂ ಹೊಂದುತ್ತವೆ ಎಂದರೆ ಅದು ಚಂಪಾ ಅವರಿಗೆ ಮಾತ್ರ. ಅವರು ಹೇಳುತ್ತಿದ್ದ ಮಾತು-ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡುವುದಿಲ್ಲ, ದ್ವೇಷವನ್ನು ಕೂಡ ಎಂಬುದು ಅತ್ಯಂತ ಪ್ರಚಲಿತದಲ್ಲಿತ್ತು. ಬಹುತೇಕರೊಂದಿಗೆ ಅವರಿಗೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಎಂದಿಗೂ ಅವುಗಳನ್ನೇ ಸಾಧಿಸಿಕೊಂಡು ಹೋದವರಲ್ಲ. ತಮಗೆ ಸರಿಯೆನಿಸದ್ದನ್ನು ಯಾರ ಭಿಡೆ, ಮುರವತ್ತು ಇಲ್ಲದೆ ಸಂಬಂಧಿಸಿದವರ ಎದುರಿಗೇ ಹೇಳುವ ತಾಕತ್ತು ಅವರಲ್ಲಿತ್ತು ಎಂದು ಕುಲಕರ್ಣಿ ಹೇಳಿದರು.
ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಚಂಪಾ ಅವರ ಬಂಡಾಯದ ಹಾಡು, ಚುಟುಕುಗಳು ಜೀವನದ ಸಾರವನ್ನು ತಿಳಿಸಿ ಹೇಳುತ್ತಿದ್ದವು. ಬರವಣಿಗೆಯಲ್ಲಿಯೂ ತಮ್ಮ ಮೊನಚು, ವ್ಯಂಗ್ಯ, ವಿಡಂಬನೆ ಮತ್ತು ತೀಕ್ಷ್ಣತೆಯನ್ನು ಅವರೆಂದಿಗೂ ಮರೆತಿರಲಿಲ್ಲ. ಅವರ ಬರಹ ಮತ್ತು ಮಾತು ಯಾವಾಗಲೂ ಎಚ್ಚರಿಕೆಯ ಗಂಟೆಗಳಾಗಿರುತ್ತಿದ್ದವು ಎಂದರು.
ಎಸ್.ವಿ. ಕುಪ್ಪಸ್ತ ಮಾತನಾಡಿದರು. ತಹಸೀಲ್ದಾರ್ ಶ್ರೀಶೈಲ ತಳವಾರ, ಗ್ರಾಪಂ ಅಧ್ಯಕ್ಷೆ ಹನುಮವ್ವ ಹಿರೇಮನಿ, ಉಪಾಧ್ಯಕ್ಷ ಹನಮಂತಗೌಡ ತಿರಕನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಬಸವರಾಜ ಸಾಲಿಮಠ, ಮುಖ್ಯ ಶಿಕ್ಷಕ ಈರಣ್ಣ ಸೋನಾರ, ಮುಖ್ಯ ಶಿಕ್ಷಕಿ ಎಸ್.ವಿ. ವಸ್ತ್ರದ, ಇತರರಿದ್ದರು. ಡಾ. ಬಿ.ಟಿ. ಶಿರಿಯಪ್ಪಗೌಡ್ರ ಹಾಗೂ ಶ್ರೀಕಾಂತ ದೊಡಮನಿ ಕಾರ್ಯಕ್ರಮ ನಿರ್ವಹಿಸಿದರು.