

ಶಿರಸಿ: ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ. ಆದರೆ, ಶಿರಸಿ ತಾಲೂಕಿನ ಹುಳಗೋಳ ಸಮೀಪದ ಅರಸಾಪುರದ ರಾಜೇಶ್ವರಿ ಹೆಗಡೆ ಅವರು ಇದನ್ನೇ ಉದ್ಯಮವನ್ನಾಗಿ ಮಾಡಿಕೊಂಡು ಯಶಸ್ಸು ಕಂಡಿದ್ದಾರೆ.
ಈ ಮೂಲಕ ಮಹಿಳೆಯರು ಕೂಡ ಸ್ವಾಲಂಬಿಯಾಗಿ ಬದುಕಲು ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
2010ರಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಇವರು ನಿತ್ಯ ಅಂದಾಜು 100 ಲೀಟರ್ ಹಾಲನ್ನು ಮಾರಾಟ ಮಾಡುತ್ತಾರೆ. ಹೆಚ್ಚಿನ ದರ ಸಿಗುವ ನಗರ ಮಾರುಕಟ್ಟೆಗೆ 20 ಲೀಟರ್ ಹಾಲು ನೀಡುತ್ತಿದ್ದಾರೆ.
ತಮಗೆ ಬೆಂಬಲವಾಗಿ ನಿಂತಿರುವ ಸ್ಥಳೀಯ ಹಾಲು ಸಹಕಾರಿ ಸಂಘಕ್ಕೆ 80 ಲೀಟರ್ ಹಾಲು ಹಾಕುತ್ತಿದ್ದಾರೆ. ಹೈನುಗಾರಿಕೆಯಿಂದ ಮಾಸಿಕ 1 ಲಕ್ಷ ರೂ.ಗೂ ಹೆಚ್ಚಿನ ವರಮಾನ ಪಡೆಯುತ್ತಿದ್ದಾರೆ.
ಆರಂಭದಲ್ಲಿ ಮನೆ ಖರ್ಚಿನ ಹಾಲಿಗಾಗಿ ಆಕಳು ಸಾಕಲಾಗಿತ್ತು. ಅದನ್ನೇ ಉದ್ಯಮದಂತೆ ಮಾಡಿಕೊಳ್ಳಲು 30 ಜಾನುವಾರುಗಳನ್ನು ಕಟ್ಟಿದ್ದರು. ಸದ್ಯ 10 ಮಹಿಳೆಯರಿಗೂ ಇಲ್ಲಿ ಕೆಲಸ ನೀಡಿದ್ದಾರೆ.
ಹೈನುಗಾರಿಕೆ ನಡುವಿನ ಅವಧಿಯಲ್ಲಿ ಕೊಟ್ಟಿಗೆಯಲ್ಲಿ ಸಿಗುವ ಸೆಗಣಿ ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಸುತ್ತಿದ್ದಾರೆ. ಇವರೇ ನಿರ್ಮಾಣ ಮಾಡಿದ ನಾಲ್ಕೂವರೆ ಎಕರೆ ಅಡಕೆ ತೋಟಕ್ಕೆ ಈ ಗೊಬ್ಬರ ಬಳಸಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ.
ಗಂಜಲ, ಸೆಗಣಿ ಬಳಸಿ ಸಾವಯವ ಗೊಬ್ಬರ ತಯಾರಿಸುತ್ತೇನೆ. 50 ಕೆಜಿ ಗೊಬ್ಬರವನ್ನು 500 ರೂಪಾಯಿಗೆ ಮಾರುತ್ತೇನೆ. ಹಾಲಿನಿಂದ ಎಷ್ಟು ಆದಾಯವಿದೆಯೋ ಅಷ್ಟೇ ಆದಾಯ ಗೊಬ್ಬರದಿಂದಲೂ ಇದೆ ಎನ್ನುತ್ತಾರೆ ರಾಜೇಶ್ವರಿ ಹೆಗಡೆ.
ಇವರ ಹೈನುಗಾರಿಕೆ ಪದ್ಧತಿಯನ್ನು ಆಸಕ್ತರು, ವಿವಿಧ ಸ್ವಸಹಾಯ ಸಂಘದ ಸದಸ್ಯರು ವೀಕ್ಷಿಸಲು ಆಗಮಿಸುತ್ತಾರೆ. ಅವರಿಗೆ ನಿತ್ಯ ಜಾನುವಾರುಗಳ ನಿರ್ವಹಣೆ, ಆಕಳ ತಳಿಗಳ ಆಯ್ಕೆ, ಕರುಗಳ ನಿರ್ವಹಣೆ, ರೋಗ ನಿರ್ವಹಣೆಯಲ್ಲಿ ಮುಂಜಾಗ್ರತಾ ಕ್ರಮಗಳು, ಹಳ್ಳಿ ಔಷಧಗಳ ಕುರಿತು ರಾಜೇಶ್ವರಿ ಮಾಹಿತಿ ನೀಡುತ್ತಾರೆ.
ಇವರ ಹೈನುಗಾರಿಕೆ, ಕೃಷಿ ಕಾಯಕಕ್ಕೆ ಜಿಲ್ಲಾಡಳಿತ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿ ಮಹಿಳೆ ಪ್ರಶಸ್ತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಉತ್ತಮ ಸಾಧಕ ಮಹಿಳೆ ಸೇರಿ ಹಲವು ಸನ್ಮಾನ, ಗೌರವ ಸಂದಿವೆ.