ಗಗನ ಸಖಿ ಕೆಲಸದ ಸಂದರ್ಶನಕ್ಕೆ ಹೋಗುತ್ತಿದ್ದ ಯುವತಿ ರಸ್ತೆ ಅಪಘಾತಕ್ಕೆ ಬಲಿ..

Airhostess
Published on

ಬೆಂಗಳೂರು: ಗಗನ ಸಖಿ ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುತ್ತಿದ್ದ ಯುವತಿಯ ಸ್ಕೂಟರ್‌ಗೆ ಕ್ಯಾಂಟರ್ ಡಿಕ್ಕಿ ಹೊಡೆದು ತಲೆಯ ಮೇಲೇ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕುರುಬರಪಾಳ್ಯದ ನಿವಾಸಿ ಗಂಗಾ (22) ಮೃತಪಟ್ಟ ಯುವತಿ. ಕ್ಯಾಂಟರ್ ಚಾಲಕ ನಾಗರಾಜ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗಂಗಾ ಗಗನಸಖಿಯಾಗುವ ಕನಸು ಕಂಡಿದ್ದಳು. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ.3ರಂದು ಗಗನಸಖಿ ಕೆಲಸಕ್ಕೆ ಕರೆದಿದ್ದ ಸಂರ್ದಶನಕ್ಕಾಗಿ ಕುರುಬರ ಪಾಳ್ಯದಿಂದ ಸ್ಕೂಟರ್‌ನಲ್ಲಿ ಏರ್‌ಪೋರ್ಟ್‌ನತ್ತ ಹೋಗುತ್ತಿದ್ದಳು. ಮಾರ್ಗಮಧ್ಯೆ ಭದ್ರಪ್ಪ ಲೇಔಟ್ ಮೆಲ್ಸೇತುವೆ ಬಳಿ ಹಿಂದಿನಿಂದ ವೇಗವಾಗಿ ಅಜಾಗರೂಕತೆಯಿಂದ ಬಂದ ಕ್ಯಾಂಟರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದ ಗಂಗಾ ತಲೆ, ಕೈ-ಕಾಲುಗಳ ಮೇಲೆ ಕ್ಯಾಂಟರ್ ಹರಿದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಂಗಾಳ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಿ ಲಾರಿ ಚಾಲಕ ನಾಗರಾಜ್‌ನ್ನು ಬಂಧಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯ ಸೆರೆ: ಗಂಗಾಳ ಬ್ಯಾಗ್‌ನಲ್ಲಿದ್ದ ಐಡಿಕಾರ್ಡ್‌ ಪರಿಶೀಲಿಸಿದಾಗ ಆಕೆಯ ಕುಟುಂಬಸ್ಥರ ಮಾಹಿತಿ ಸಿಕ್ಕಿತ್ತು. ನಂತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ರಸ್ತೆ ಅಪಘಾತದ ದೃಶ್ಯ ಸೆರೆಯಾಗಿದ್ದು, ಚಾಲಕ ನಾಗರಾಜ್ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿರುವುದು ದುರ್ಘಟನೆಗೆ ಕಾರಣ ಎಂಬುದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net