ನ್ಯಾಯಾಧೀಶರ ಎದುರೇ ಕುಸಿದುಬಿದ್ದ ಮಹಿಳೆ

Published on

ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಅವಡ | ಧಮ್ಕಿಗೆ ಹೆದರಿ ಹೃದಯಾಘಾತ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ

ಅಟ್ರಾಸಿಟಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮಹಿಳೆಯೊಬ್ಬರು ಜಿಲ್ಲಾ ನ್ಯಾಯಾಧೀಶರ ಎದುರೇ ಹೃದಯಾಘಾತವಾಗಿ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ.

ದಲಿತ ಮುಖಂಡರೊಬ್ಬರ ಬೆದರಿಕೆ ಹಿನ್ನೆಲೆಯಲ್ಲಿ ಭಯದಲ್ಲಿಯೇ ಮಂಗಳವಾರ ಚಿಕ್ಕಬಳ್ಳಾಪುರದಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗೆ ವಂಟೀರವಾಂಡ್ಲಪಲ್ಲಿಯ ಮಾರಮ್ಮ ಹಾಜರಾಗಿದ್ದರು. 1ನೇ ಹೆಚ್ಚುವರಿ ಸಿವಿಲ್​ ನ್ಯಾಯಾಧೀಶರ ಸಭಾಂಗಣದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಳಿಕ ವಂಟೀರವಾಡ್ಲಪಲ್ಲಿಯಲ್ಲಿ ಪೊಲೀಸ್​ ಬಿಗಿ ಬಂದೋಸ್ತ್​ ನಡುವೆ ಮೃತಳ ಅಂತ್ಯಸಂಸ್ಕಾರ ನಡೆದಿದೆ.

ಪ್ರಕರಣದ ಹಿನ್ನೆಲೆ: ಸಾಮಾನ್ಯ ವರ್ಗದ ಮಾರಮ್ಮ ಕೃಷಿಕ ಬಡ ಕುಟುಂಬದ ಮಹಿಳೆ. ಇತ್ತೀಚೆಗೆ ಕೃಷಿ ಜಮೀನು ಸರ್ವೇ, ಗಡಿರೇಖೆ ಗುರುತಿಸುವ ವಿಚಾರವಾಗಿ ವಂಟೀರವಾಂಡ್ಲಪಲ್ಲಿಯ ಎಸ್ಟಿ ಜನಾಂಗದ ನರಸಿಂಹಪ್ಪ ಹಾಗೂ ಮಾರಮ್ಮ ಕುಟುಂಬ ಸದಸ್ಯರ ನಡುವೆ 2024ರ ಜನವರಿಯಲ್ಲಿ ಜಗಳ ನಡೆದು, ಎರಡು ಗುಂಪಿನವರು ಪಾತಪಾಳ್ಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ವೇಳೆ ಕೆಲ ಮುಖಂಡರ ಒತ್ತಡಕ್ಕೆ ಮಣಿದು ಮಾರಮ್ಮ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಅಟ್ರಾಸಿಟಿ ಕೇಸ್​ ದಾಖಲಿಸಲಾಗಿತ್ತು ಎನ್ನಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಅಂತಿಮ ಟ್ಟದಲ್ಲಿರುವ ಸಮಯದಲ್ಲಿ ಎರಡು ಗುಂಪಿನ ನಡುವೆ ರಾಜಿ ನಡೆಸಿ ಕೇಸ್​ ಖುಲಾಸೆಗೊಳಿಸುವುದಾಗಿ ದಲಿತ ಮುಖಂಡರೊಬ್ಬರು ಮಾರಮ್ಮ ಕುಟುಂಬಕ್ಕೆ ಭರವಸೆ ನೀಡಿದ್ದು, ಪ್ರಕರಣದ ಇತ್ಯರ್ಥಕ್ಕೆ ಹಣದ ಗೊಂದಲ ಉಂಟಾಗಿ ಸಂಧಾನ ಮುರಿದು ಬಿದ್ದಿತ್ತು ಎನ್ನಲಾಗಿದೆ. ಇದರ ನಡುವೆ ಆ.28 ರಂದು ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ್ದ ಮಾರಮ್ಮ (54) ಮತ್ತು ಕುಟುಂಬ ಸದಸ್ಯರಿಗೆ ಸಂಧಾನದ ಸೂತ್ರಧಾರಿಯೇ ಒಂದು ಗತಿ ಕಾಣಿಸಿ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದಾನೆ. ಇದರ ಭಯದಲ್ಲಿ ವಿಚಾರಣೆಗೆ ಹಾಜರಾದ ಮಾರಮ್ಮ ಹೃದಯಾಘಾತವಾಗಿ ನ್ಯಾಯಾಲಯದಲ್ಲೆ ಕುಸಿದು ಬಿದ್ದಿದ್ದಾರೆ.

ವಂಟೀರವಂಡ್ಲಪಲ್ಲಿಯ ನರಸಿಂಹಪ್ಪ ಕುಟುಂಬಸ್ಥರ ನಡುವೆ ಜಮೀನು ವಿಚಾರದ ಗಲಾಟೆಗೆ ಪೊಲೀಸರು ಅಟ್ರಾಸಿಟಿ ಕೇಸ್​ ದಾಖಲಿಸಿದ್ದರು. ಇದರ ನಡುವೆ ಹಣ ಕೊಟ್ಟರೆ ಕೇಸ್​ ರಾಜಿ ಮಾಡಿಸುವುದಾಗಿ ಗುಂತೂರುಪಲ್ಲಿಯ ದಲಿತ ಮುಖಂಡರೊಬ್ಬರು ಹೇಳಿದ್ದರು. ಆದರೆ ಇದಕ್ಕೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದುವರಿಸಿದ್ದು, ಇದೇ ವೇಳೆ ಬೆದರಿಕೆಯ ಮಾತುಗಳಿಗೆ ಆತಂಕಗೊಂಡು ತಾಯಿ ಮಾರಮ್ಮ ಜಿಲ್ಲಾ ನ್ಯಾಯಾಧೀಶರ ಎದುರಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇಂತಹ ದುರಂತ ಮರುಕಳಿಸಲು ಬಿಡಬಾರದು. ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು.

| ವಿ.ಆರ್​.ಮಂಜುನಾಥರೆಡ್ಡಿ ಮೃತ ಮಾರಮ್ಮಳ ಮಗಬಂದೋಬಸ್ತ್​ನಲ್ಲಿ ಸಂಸ್ಕಾರ

ಜಿಲ್ಲಾಸ್ಪತ್ರೆಯಿಂದ ಮಾರಮ್ಮಳ ಮೃತದೇಹವನ್ನು ವಂಟೀರವಾಂಡ್ಲಪಲ್ಲಿ ಗ್ರಾಮಕ್ಕೆ ತಂದರೆ ಗಲಾಟೆಗಳು ನಡೆಯಬಹುದೆಂಬ ಲೆಕ್ಕಾಚಾರದಲ್ಲಿ ಪಾತಪಾಳ್ಯ ಠಾಣೆ ಪೊಲೀಸರು ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಂಡು, ಅಂತ್ಯ ಸಂಸ್ಕಾರ ಮಾಡಿದ್ದಾರೆ. ಇದೇ ವೇಳೆ ವಾಗ್ವಾದಗಳು ಜೋರಾದಾಗ ಮುಖಂಡರ ಮನವೊಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net