

ಚಿಂತಾಮಣಿ: ತಾಲೂಕಿನ ಕೈವಾರ ಗ್ರಾಮದಲ್ಲಿ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಲಲಿತಮ್ಮ (67) ಕೊಲೆಯಾಗಿದ್ದ ಮಹಿಳೆ. ಶಿಡ್ಲಘಟ್ಟ ತಾಲೂಕಿನ ತುಮ್ಮನಹಳ್ಳಿ ಟಿ.ಎಸ್. ದೇವರಾಜ್ (30) ಬಂಧಿತ.
ಕೊಲೆಗಾರನ ಬಂಧನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಎಸ್‌ಪಿ ಕುಶಾಲ್ ಚೌಕ್ಸೆ ಮತ್ತು ಅಡಿಷನಲ್ ಎಸ್‌ಪಿ ರಜಾಕ್ ಇಮಾಮ್ ಖಾಸಿಮ್, ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಪಿ. ಮುರಳೀಧರ್ ನೇತೃತ್ವದಲ್ಲಿ ಪಿಎಸ್‌ಐ ಶಿವರಾಜ್ ಸೇರಿ 20ಕ್ಕೂ ಹೆಚ್ಚು ಮಂದಿಯ ತಂಡವನ್ನು ರಚಿಸಿದ್ದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಕುಶಾಲ್ ಚೌಕ್ಸೆ, ಕೈವಾರ ಹಾಗೂ ಇತರ ಕಡೆಗಳಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ, ಮೊಬೈಲ್ ಟವರ್ ಲೊಕೇಷನ್‌ಗಳನ್ನು ಆಧರಿಸಿ ಕಾರ್ಯಾಚರಣೆಗಿಳಿದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕೈವಾರದ ನಿವೃತ್ತ ಸೆಕ್ರೆಟರಿ ಲೇಟ್ ಗೋವಿಂದಪ್ಪ ಅವರ ಪತ್ನಿ ಲಲಿತಮ್ಮ ಮತ್ತು ಕೊಲೆ ಮಾಡಿದ ಅರೋಪಿ ದೇವರಾಜ್ ಸಂಬಂಧಿಗಳಾಗಿದ್ದು, ಇಬ್ಬರ ನಡುವೆ ಹಣದ ಲೇವಾದೇವಿ ಇತ್ತು. ಲಲಿತಮ್ಮ ಒಬ್ಬಳೇ ಮನೆಯಲ್ಲಿರುವುದನ್ನು ತಿಳಿದ ಆರೋಪಿ ಆ.5ರಂದು ಮಧ್ಯಾಹ್ನ ಮನೆಗೆ ಬಂದವನು ಮತ್ತಷ್ಟು ಸಾಲ ಕೇಳಿದ್ದಾನೆ. ಹಳೆಯ ಸಾಲ ವಾಪಸ್ ನೀಡದೆ ಮತ್ತೆ ಸಾಲ ಕೇಳಲು ಬಂದಿದ್ದೀಯಾ ಎಂದು ಲಲಿತಮ್ಮ ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ದೇವರಾಜ್ ಆಕೆಯ ಕೆನ್ನೆಗೆ ಹೊಡೆದಿದ್ದಾನೆ. ಕೆಳಕ್ಕೆ ಬಿದ್ದ ಲಲಿತಮ್ಮ ಎಚ್ಚರಗೊಂಡರೆ ಹಲ್ಲೆ ಮಾಡಿರುವ ವಿಷಯ ಬಹಿರಂಗವಾಗುತ್ತದೆ ಎಂಬ ಭಯದಲ್ಲಿ ಆಕೆಯನ್ನು ಕೊಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ. ಅಲ್ಲದೇ, ಸರಕ್ಕಾಗಿ ಕೊಲೆಯಾಗಿದೆ ಎಂದು ಬಿಂಬಿಸಲು ಯತ್ನಿಸಿರುವುದಾಗಿ ಆರೋಪಿ ದೇವರಾಜ್ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಎಸ್‌ಪಿ ತಿಳಿಸಿದರು.
ಮೃತ ಲಲಿತಮ್ಮಳ ಮಗ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಒಂದು ವಾರದೊಳಗೆ ಅರೋಪಿಯನ್ನು ಬಂಧಿಸಿದ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳ ಮತ್ತು ತಂಡವನ್ನು ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ.