

ಮುರಗೋಡ: ಗ್ರಾಮೀಣ ಪ್ರದೇಶಗಳಿಗೆ ನೈರ್ಮಲ್ಯ ಸೇರಿ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ಕೋಟ್ಯಂತರ ವ್ಯಯಿಸುತ್ತಿದ್ದರೂ, ಸಮೀಪದ ಮಳಗಲಿ ಗ್ರಾಮ ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿದೆ.
ಸಮರ್ಪಕ ಸಾರಿಗೆ, ಶಾಲಾ ಆಟದ ಮೈದಾನ, ರಸ್ತೆ, ಸಣ್ಣ ನೀರಾವರಿ ಕಾಲುವೆ ದುರಸ್ತಿ, ಸಾರ್ವಜನಿಕ ಶೌಚಗೃಹ ಹಾಗೂ ಚರಂಡಿ ವ್ಯವಸ್ಥೆಗಳಿಂದ ಗ್ರಾಮ ವಂಚಿತವಾಗಿದೆ. ಹೀಗಾಗಿ, ಅಗತ್ಯ ಸೌಲಭ್ಯ ಮರೀಚಿಕೆಯಾಗಿದ್ದರಿಂದ ಸಾರ್ವಜನಿಕರು ಪರಿತಪಿಸುವಂತಾಗಿದೆ.
ಅನಾರೋಗ್ಯ ಭೀತಿ: ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಪರಿಣಾಮ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಸ್ಥಳಿಯ ನಿವಾಸಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಮೂಲಕ ಅನಾರೋಗ್ಯ ಭೀತಿಯಲ್ಲೇ ದಿನ ಕಳೆಯುತ್ತಿದ್ದಾರೆ.
ಜಿಪಿಎಸ್ ನೆ ಹಾಗೂ ಯರಗಟ್ಟಿ ತಾಲೂಕಿಗೆ ಮಳಗಲಿ ಗ್ರಾಮ ಸೇರಿಸುವುದು ಸೇರಿ ಗ್ರಾಮಸ್ಥರ ಬಹುದಿನಗಳ ಬಹುತೇಕ ಬೇಡಿಕೆಗಳು ಸಾಕಾರಗೊಳ್ಳದೆ
ನನೆಗುದಿಗೆ ಬಿದ್ದಿವೆ.
ಗ್ರಾಮಸ್ಥರು ಕಳೆದ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡಿದಾಗ ಸ್ಥಳಕ್ಕೆ ದೌಡಾಯಿಸಿದ್ದ ಅಧಿಕಾರಿಗಳು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳು ಹಾಗೂ
ಜನಪ್ರತಿನಿಧಿಗಳು ಮಳಗಲಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಮುಂದಾಗಬೇಕೆಂದು ಮುಖಂಡ ರಾವೇಂದ್ರ ರುದ್ರಪ್ಪನವರ ಆಗ್ರಹಿಸಿದ್ದಾರೆ.