

ಬೆಳ್ತಂಗಡಿ: ಉತ್ತಮ ಶಿಕ್ಷಕ ಪ್ರಶಸ್ತಿಗೆ ಕುಂದಾಪುರ ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಅವರನ್ನು ಸರ್ಕಾರದ ಅಧಿಕೃತ ಸಮಿತಿ ಆಯ್ಕೆ ಮಾಡಿ ಹೆಸರು ಪ್ರಕಟಿಸಿ, ಬಳಿಕ ಸರ್ಕಾರಕ್ಕೆ ಎಸ್ಡಿಪಿಐ ದೂರು ನೀಡಿದೆ ಎಂಬ ಕಾರಣಕ್ಕಾಗಿ ತಡೆ ಹಿಡಿದದ್ದು ಎಷ್ಟು ಸರಿ? ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಡಿಪಿಐ ಕೇಳಿ ಈ ಸರ್ಕಾರ ನಡೆಯುತ್ತದೆಯೇ? ಯಾರನ್ನೋ ಓಲೈಕೆ ಮಾಡುವ ಕಾರಣಕ್ಕೆ ಪ್ರಶಸ್ತಿ ತಡೆಹಿಡಿದದ್ದು ಸರಿಯಲ್ಲ. ಇದು ಶಿಕ್ಷಕ ದಿನಾಚರಣೆಯ ಸಂದರ್ಭ ಶಿಕ್ಷಕ ಸಮುದಾಯಕ್ಕೆ ಮಾಡಿದ ಅವಮಾನ. ಹನುಮಾನ್ ಚಾಲೀಸಾ ವಿಚಾರದಲ್ಲೂ ಸರ್ಕಾರ ಇದೇ ರೀತಿ ನಡೆದುಕೊಂಡಿತ್ತು. ಈ ರೀತಿಯ ನಡವಳಿಕೆ ಸಮಾಜದಲ್ಲಿ ಶಾಂತಿ ಕದಡುವ ವಾತಾವರಣ ಸೃಷ್ಟಿ ಮಾಡುತ್ತದೆ. ಗಣೇಶೋತ್ಸವ ಪ್ರಸಾದ ವಿತರಣೆ ಬಗ್ಗೆ ವಿಪರೀತ ನಿಯಮ ಮಾಡಿದ್ದೀರಿ. ಸರ್ಕಾರ ಮಾಡುತ್ತಿರುವ ತಾರತಮ್ಯ ತುಷ್ಟಿಕರಣಕ್ಕೆ ಸಂವಿಧಾನ ಅನ್ವಯ ಆಗುವುದಿಲ್ಲವೇ?ಹೀಗೆ ಮಾಡುತ್ತಿದ್ದರೆ ಈ ರಾಜ್ಯವನ್ನು ಕಾಪಾಡುವವರು ಯಾರು? ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ಮದ ಏರಿದೆ. ಸಾಂವಿಧಾನಿಕ ವ್ಯವಸ್ಥೆ ಬಿಟ್ಟು ಏನೇ ಮಾಡಿದರೂ ಕೂಡ ಶಾಂತಿ ಕದಡುವ ವಾತಾವರಣ ಸೃಷ್ಟಿ ಆಗುತ್ತದೆ. ಅಂಥ ಕೆಲಸ ಮಾಡದಿರಿ. ತಪ್ಪುಗಳನ್ನು ಸರಿಪಡಿಸದೆ ಇದೇ ರೀತಿ ಮುಂದುವರಿದರೆ ಹೋರಾಟ ಅನಿವಾರ್ಯ ಎಂದು ಕೆ.ಪ್ರತಾಪಸಿಂಹ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.