

ರಾಯಚೂರು: ಹಿಂದು-ಮುಸ್ಲಿಮರ ಪವಿತ್ರ ಹಬ್ಬಗಳಾದ ಚಂದ್ರಮಾನ ಯುಗಾದಿ ಹಾಗೂ ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು ಎಂದು ಪೊಲೀಸ್ ಉಪ ಅಧೀಕ್ಷಕ ಎಂ.ಜಿ ಸತ್ಯನಾರಾಯಣರಾವ್ ಹೇಳಿದರು.
ನಗರದ ಸರ್ದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ರಂಜಾನ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಶಾಂತಿ ಸಭೆಯಲ್ಲಿ ಶನಿವಾರ ಮಾತನಾಡಿದರು.
ರಂಜಾನ್ ಮತ್ತು ಯುಗಾದಿ ಆಯಾ ಧರ್ಮಗಳ ಪವಿತ್ರ ಹಬ್ಬಗಳಲ್ಲೊಂದಾಗಿದ್ದು, ಆಯಾ ಧರ್ಮದವರು ಹಬ್ಬದ ದಿನದಂದು ಶಾಂತಿಯುತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು. ಸಾರ್ವಜನಿಕರಿಗೆ ಹಬ್ಬದ ದಿನದಂದು ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಬೇಸಿಗೆ ತಾಪಮಾನ ಹೆಚ್ಚಾಗಿರುವ ಕಾರಣ ಪೊಲೀಸ್ ಇಲಾಖೆಯಿಂದ ಕುಡಿವ ನೀರಿನ ವ್ಯವಸ್ಥೆ ಮಾಡಲಾಗುವುದು. ಎಲ್ಲರೂ ಒಂದು ಎಂಬ ಭಾವನೆಯಿಂದ ಹಬ್ಬ ಆಚರಣೆ ಮಾಡುವಂತೆ ತಿಳಿಸಿದರು.
ವಕ್ಫ್ ಮಂಡಳಿ ಅಧ್ಯಕ್ಷ ಮಹ್ಮದ್ ಮೌಲಾನಾ ಫರೀದ್ ಖಾನ್, ಪೊಲೀಸ್ ಅಧಿಕಾರಿ ಉಮೇಶ ಕಾಂಬ್ಳೆ, ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಸಂತೋಷ ಹಳ್ಳೂರು, ಜೆಸ್ಕಾಂ ಇಲಾಖೆ ಸಹಾಯಕ ಇಂಜಿನಿಯರ್ ಸೂಗುರಯ್ಯ ಸ್ವಾಮಿ, ಅಗ್ನಿಶಾಮಕ ದಳದ ಅಧಿಕಾರಿ ಖಾಸಿಂ ಸಾಬ್, ನೇತಾಜಿ ಠಾಣೆ ಪಿಎಸ್‌ಐ ಚಂದ್ರಪ್ಪ, ಮಾರ್ಕೇಟ್ ಯಾರ್ಡ್ ಪಿಎಸ್‌ಐ ಅಮಿತಾ ರಾಮ, ಪಶ್ಚಿಮ ಠಾಣೆ ಪಿಎಸ್‌ಐ ಶಾಂತಮೂರ್ತಿ, ಸಂಚಾರಿ ಠಾಣೆಯ ಅಧಿಕಾರಿ ವೆಂಕಟೇಶ ಇತರರಿದ್ದರು.