ವೈನ್ಸ್‌ಶಾಪ್‌ಗೆ ಕನ್ನ - ಕದ್ದೊಯ್ದಿರುವುದು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಮದ್ಯ!

wine shop new
Published on

ಉಳ್ಳಾಲ: ಕುತ್ತಾರ್ ಸಮೀಪದ ನಿತ್ಯಾನಂದ ನಗರದಲ್ಲಿ ಎಂಎಸ್‌ಐಎಲ್‌ನ ವೈನ್‌ಶಾಪ್‌ಗೆ ನುಗ್ಗಿದ ಕಳ್ಳರು ಸುಮಾರು ಒಂದು ಲಕ್ಷ ರೂ. ಮೌಲ್ಯದ ಕಡಿಮೆ ಬೆಲೆಯ ಮದ್ಯ ಕಳವುಗೈದಿರುವ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.

ವೈನ್‌ಶಾಪ್ ಎದುರಿಗೆ ಬಟ್ಟೆ ಕಟ್ಟಿ , ಶಟರ್ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಡಿಮೆ ಬೆಲೆಯ ಮದ್ಯ ಕಳವುಗೈದಿದ್ದಾರೆ. ಅಂಗಡಿಯೊಳಕ್ಕೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಈ ಬಗ್ಗೆ ಗೊತ್ತಿದ್ದ ಕಳ್ಳರು ಸಿಸಿಟಿವಿ ದಾಖಲೆ ಹೊಂದಿರುವ ಡಿವಿಆರ್ ಕಳವುಗೈದು ಚಾಣಾಕ್ಷತೆ ಪ್ರದರ್ಶಿಸಿದ್ದಾರೆ. ಪಿಲಾರ್‌ನ ಪುರುಷೋತ್ತಮ್ ಎಂಬುವರಿಗೆ ಸೇರಿದ ವೆನ್‌ಶಾಪ್ ಇದಾಗಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿ ಶಟರ್ ತೆರೆದಿರುವುದನ್ನು ಕಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಅಂಗಡಿ ತೆರೆದಿರುವುದೆಂದು ಭಾವಿಸಿ, ಮದ್ಯ ನೀಡುವಂತೆ ಕೇಳಿಕೊಳ್ಳುತ್ತಿರುವ ದೃಶ್ಯ ಸ್ಥಳದಲ್ಲಿ ಕಂಡುಬಂತು. ಕೆಲವರು ದ್ವಿಚಕ್ರ ವಾಹನಗಳಲ್ಲಿ ಬಂದರೆ, ಇನ್ನು ಕೆಲವರು ಕಾರಿನಲ್ಲಿ ಬಂದು ಮದ್ಯ ಕೇಳಿ ಪೊಲೀಸರಿಂದ ಬೈಗುಳ ತಿಂದು ಹಿಂದಕ್ಕೆ ಹೋದರು.

ಅಂಗಡಿ ಸಮೀಪದಲ್ಲೇ ಇರುವ ಪಾನ್ ಅಂಗಡಿಯಿಂದ 10 ಪ್ಯಾಕೆಟ್ ಸಿಗರೇಟ್‌ಗಳನ್ನೂ ಕಳ್ಳರು ಕಳವುಗೈದಿದ್ದಾರೆ. ಮೂರು ವರ್ಷದಲ್ಲಿ 10ನೇ ಬಾರಿ ಇದೇ ರೀತಿಯಲ್ಲಿ ಕಳವು ನಡೆಯುತ್ತಿದೆ ಎಂದು ಪಾನ್ ಅಂಗಡಿ ಮಾಲೀಕ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net